ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೊಲೀಸ್ ಠಾಣೆಯಲ್ಲಿನ ಆಗುಹೋಗು ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಆರೋಪಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಎನ್.ಆರ್.ಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರು ಕಾನ್ಸ್‌ಟೇಬಲ್ ಕಾಂತೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಪ್ರಾಪ್ತ ಬಾಲಕಿಗೆ ಭೂತ ಬಿಡಿಸುವ ನೆಪದಲ್ಲಿ ಕೋಳಿ ರಕ್ತ ಕುಡಿಸಿ ಅಮಾನವೀಯವಾಗಿ ಹಿಂಸಿಸಿದ ಆರೋಪ ಎದುರಿಸುತ್ತಿರುವ ಸತೀಶ್ ಪಾತ್ರಿ ವಿರುದ್ಧ ಎನ್.ಆರ್.ಪುರ ಹಾಗೂ ಕೊಪ್ಪ ಪೊಲೀಸ್ ಠಾಣೆಗಳಲ್ಲಿ ಅತ್ಯಾಚಾರ, ಪೋಕ್ಸೋ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಸತೀಶ್ ಪಾತ್ರಿ ಕಳೆದ ಒಂದು ತಿಂಗಳಿನಿಂದ ಪೊಲೀಸರ ಕಣ್ಣುತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.
ಆರೋಪಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರೂ, ಇದೇ ವೇಳೆ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಆರೋಪಿ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಪೊಲೀಸರು ನಡೆಸುತ್ತಿದ್ದ ಕಾರ್ಯಾಚರಣೆ ಹಾಗೂ ಠಾಣೆಯಲ್ಲಿನ ಪ್ರಮುಖ ಆಗುಹೋಗುಗಳ ಮಾಹಿತಿಯನ್ನು ಆರೋಪಿಗೆ ತಲುಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಗೆ ಪೊಲೀಸ್ ಇಲಾಖೆಯೊಳಗಿನಿಂದಲೇ ಮಾಹಿತಿ ರವಾನೆಯಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಕರ್ತವ್ಯಲೋಪ ಹಾಗೂ ತನಿಖೆಗೆ ಅಡ್ಡಿಯಾಗುವ ರೀತಿಯಲ್ಲಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಕಾಂತೇಶ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇತ್ತ ಅತ್ಯಾಚಾರ ಪ್ರಕರಣದ ಆರೋಪಿ ಸತೀಶ್ ಪಾತ್ರಿ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ
Constable suspended for siding with rape accused
Leave a comment