ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಐದು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಹಲವರು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಈ ಸಂಬಂಧ ಗ್ರಾಮಾಂತರ, ಹರಿಹರಪುರ, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಮರ್ಲೆ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಎಲೆಕ್ಟ್ರಿಕ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಶ್ರೀಕಾಂತ್ (32) ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಮರ್ಲೆ ಗ್ರಾಮದ ಗಿಡ್ಡೇನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪಘಾತದ ಬಳಿಕ ಎಲೆಕ್ಟ್ರಿಕ್ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಿಹರಪುರ: ಸಿಗದಾಳ್ ಘಾಟ್ ರಸ್ತೆಯಲ್ಲಿ ಸ್ಕೂಟಿ ಹಾಗೂ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಅನಂತ ನಾಯ್ಕ (51) ಸೇರಿದಂತೆ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಅನಂತ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರೀಕೆರೆ: ದಸರಾ ರಜೆ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಸೀತಾಪುರ ಕಾವಲ್‌ಗೆ ತೆರಳುತ್ತಿದ್ದ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಆಟೋ ಪಲ್ಟಿಯಾಗಿ ನಾಲ್ವರಿಗೆ ಗಾಯಗಳಾಗಿವೆ. ಜ್ಯೋತಿ, ದೀಪಾ ಹಾಗೂ ವಿದ್ಯಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು: ಕಡೂರು-ಬಾಣವಾರ ರಸ್ತೆಯ ಅಗ್ನಿಶಾಮಕ ಠಾಣೆ ಎದುರು ಬೈಕ್‌ಗೆ ಹಿಂಬದಿಯಿಂದ ಬೊಲೆರೋ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೇಜು ಹಾಗೂ ಹಿಂಬದಿ ಕುಳಿತಿದ್ದ ಗಿರೀಶ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಡೂರಿನ ಕೆಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಂಪುರ: ಸೆ.17ರಂದು ರಾತ್ರಿ ಹೊಸದುರ್ಗ ರಸ್ತೆಯಲ್ಲಿ ಸ್ಕೂಟಿಗೆ ಎದುರಿನಿಂದ ಬಂದ ಸ್ಲೆಂಡರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ತೇಜಸ್ವಿ ಅವರಿಗೆ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದರು. ಅವರ ತಾಯಿ ಅನುಸೂಯಮ್ಮ ಅವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Several people injured in five separate accidents in the district.
Leave a comment