ಚಿಕ್ಕಮಗಳೂರು: ಕಳೆದ 25 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ, ರಜೆಯನ್ನೂ ಪಡೆಯದೆ, ನಿರಂತರವಾಗಿ ರಾಷ್ಟ್ರಕ್ಕಾಗಿ ಕೆಲಸ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಅವರು ಒಬ್ಬ ಕನಸುಗಾರ ಮಾತ್ರವಲ್ಲದೆ, ಆ ಕನಸನ್ನು ನನಸು ಮಾಡುವತ್ತ ಹೆಜ್ಜೆಯಿಡುವ ಕರ್ಮಯೋಗಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ. ಟಿ ಹೇಳಿದರು.
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯ ಶ್ರೀ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನಡೆದ ‘ಸೇವಾ ಜ್ಯೋತಿ ಯಾತ್ರೆ, ವಿಕಸಿತ ಭಾರತ ಸಂಕಲ್ಪ ಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕುರಿತ ಭಾಷಣ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು 25 ವರ್ಷಗಳ ಸುದೀರ್ಘ ಅವಧಿಯಲ್ಲಿ 13 ವರ್ಷ ಮುಖ್ಯಮಂತ್ರಿಯಾಗಿ ಹಾಗೂ 12 ವರ್ಷ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವುದು ಮಾತ್ರ ಅವರ ವಿಶೇಷತೆಯಲ್ಲ. 25 ವರ್ಷಗಳ ಕಾಲ ಕಳಂಕರಹಿತ ಆಡಳಿತ ನಡೆಸಿರುವುದು ಹಾಗೂ ನಿರಂತರ ಪರಿಶ್ರಮದಿಂದ ಕಾರ್ಯನಿರ್ವಹಿಸಿರುವುದು ಅವರ ವಿಶೇಷತೆ. ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ ಎಂದು ಹೇಳಿದರು. ಒಂದು ಕಾಲದಲ್ಲಿ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವಂತಹ ಪರಿಸ್ಥಿತಿ ನಮ್ಮದಾಗಿತ್ತು. ಆದರೆ, ಮೋದಿಯವರು ಬಂದ ನಂತರ ದೇಶ ಬಲಿಷ್ಠವಾಗಿದೆ ಎಂದರು.
ಜನಧನ್, ಉಜ್ವಲ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳು ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ಬಂದಿವೆ. ಹಿಂದೆ ದೇಶದ ಮೇಲೆ ದಾಳಿ ನಡೆದಾಗ ಭಾರತ ತನ್ನ ಪ್ರತಿಕ್ರಿಯೆಯನ್ನು ಮಿತಿಗೊಳಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ದಾಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸುತ್ತಿದೆ. ಸರ್ಜಿಕಲ್ ಸ್ಟ್ರೈಕ್‌ನಂತಹ ಕ್ರಮಗಳ ಮೂಲಕ ದೇಶದ ಭದ್ರತಾ ನೀತಿಯಲ್ಲಿ ಬದಲಾವಣೆ ಬಂದಿದೆ ಎಂದು ರವಿ ಅವರು ಹೇಳಿದರು.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಡಳಿತದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದ ಸಂದರ್ಭದಲ್ಲಿ ಮೋದಿ ನೇತೃತ್ವದ ಸರ್ಕಾರ ಆರ್ಥಿಕತೆಯನ್ನು ಬಲಪಡಿಸುವ ಕೆಲಸ ಮಾಡಿದೆ. ಭಾರತದ ಆರ್ಥಿಕತೆ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರ ಗೌರವವನ್ನು ಹೆಚ್ಚಿಸುವ ಕೆಲಸವೂ ನಡೆದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರೊಂದಿಗೆ ಸಂಬಂಧ ಹೊಂದಿರುವ ಐದು ಸ್ಥಳಗಳನ್ನು ಪಂಚತೀರ್ಥಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸಲಾಗಿದೆ ಎಂದು ರವಿ ಅವರು ತಿಳಿಸಿದರು.
2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯಕ್ಕೆ ದೊರತು 100 ವರ್ಷ ಪೂರ್ಣಗೊಳ್ಳುವ ವೇಳೆಗೆ ಭಾರತ ವಿಕಸಿತ, ಆತ್ಮನಿರ್ಭರ, ಬಡತನ ಮುಕ್ತ ಹಾಗೂ ವಿಶ್ವಗುರು ರಾಷ್ಟ್ರವಾಗಬೇಕು ಎಂಬ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಈ ಸಂಕಲ್ಪವನ್ನು ಸಾಕಾರಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ‘ವೋಕಲ್ ಫಾರ್ ಲೋಕಲ್’ ಅಭಿಯಾನವನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದೇಶಿ ಉತ್ಪನ್ನಗಳ ಬದಲಿಗೆ ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉತ್ಪಾದಕರು ಮತ್ತು ಆರ್ಥಿಕತೆಯನ್ನು ಬಲಪಡಿಸಬಹುದು ಎಂದು ಅವರು ಹೇಳಿದರು.
ಚಿಕ್ಕಮಗಳೂರಿಗೆ ಮೋದಿ ಅವರ ಕೊಡುಗೆಗಳನ್ನು ಸ್ಮರಿಸಿದ ರವಿ ಅವರು, ಚಿಕ್ಕಮಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ, ಚಿಕ್ಕಮಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಚಿಕ್ಕಮಗಳೂರು–ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು–ಕಡೂರು–ಹೊನ್ನಾವರ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ, ಚಿಕ್ಕಮಗಳೂರು–ಬೇಲೂರು–ಹಾಸನ ರೈಲು ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಉಲ್ಲೇಖಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಪರವಾಗಿ ಮಾತ್ರವಲ್ಲದೆ, ಭವ್ಯ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಪುಣ್ಯಾತ್ಮರಿಗೆ ಭಗವಂತ ಸದಾ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಭವ್ಯ ಭಾರತದ ನಿರ್ಮಾಣದ ಅವರ ಕನಸು ನನಸಾಗುವ ನಿಟ್ಟಿನಲ್ಲಿ ನಾವೆಲ್ಲರೂ ಅವರೊಂದಿಗೆ ದೃಢವಾಗಿ ನಿಲ್ಲಬೇಕು. ಅವರ ಸಂಕಲ್ಪವೇ ದೇಶದ ಸಂಕಲ್ಪ, ದೇಶದ ಹಿತದ ಸಂಕಲ್ಪವಾಗಿದ್ದು, ಆ ಸಂಕಲ್ಪಕ್ಕೆ ಶಕ್ತಿ ತುಂಬುವ ಕಾರ್ಯವನ್ನು ನಾವೆಲ್ಲರೂ ಒಗ್ಗಟ್ಟಾಗಿ ಮಾಡೋಣ ಎಂದು ಕರೆ ನೀಡಿದರು.
ಮಾಜಿ ವಿಧಾನ ಪರಿಷತ್ ಮಾಜಿ up ಸಭಾಪತಿ ಎಂ.ಕೆ ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಕನಕರಾಜ್ ಅರಸ್, ಬಿ.ಜಿ.ಸೋಮಶೇಖರ್, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ. ಕಲ್ಮುರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರ ಸಭಾ ಅಧ್ಯಕ್ಷೆ ಭವ್ಯ ಮಂಜುನಾಥ್, ನಗರ ಮಂಡಲ ಅಧ್ಯಕ್ಷ ಕೆ.ಎಸ್ ಪುಷ್ಪರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎನ್ ವಿಜಯ್ ಕುಮಾರ್, ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಸ್.ಪುಟ್ಟಸ್ವಾಮಿ, ಬಿಜೆಪಿ ಹಿರಿಯ ಮುಖಂಡರಾದ ಕೋಟೆ ರಂಗನಾಥ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
The resolve to be ‘Vocal for Local’ is essential for building a developed India.
Leave a comment