ಚಿಕ್ಕಮಗಳೂರು:- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಹೆಮ್ಮೆಯ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ಅವರ ದೂರ ದೃಷ್ಟಿ, ಸಾಮಾಜಿಕ ಪರಿಕಲ್ಪನೆಯಿಂದಾಗಿ ಪ್ರತಿಯೊಬ್ಬ ನಾಗರೀಕರು ಸರಿಸಮಾನವಾಗಿ ಭಾರತೀಯರಾಗಿ ಬದುಕುವ ವಿಧಾನವನ್ನು ಕಲಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷರೂ ಆದ ಡಾ.ಕೆಪಿ.ಅಂಶುಮಂತ್ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ವತಿಯಿಂದ ನಗರದ ದಂಟರಮಕ್ಕಿ ಬಡಾವಣೆಯಲ್ಲಿ ಸಂವಿಧಾನ ಪೀಠಿಕೆ ಬೋಧಿಸುವ ಮತ್ತು ಸಂವಿಧಾನ ಬಚಾವೋ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಪದೇ ಪದೇ ಸಂವಿಧಾನ ಬದಲಾವಣೆ ವಿಷಯ ಪ್ರಸ್ತಾಪ ಮಾಡುತ್ತಿರುವುದನ್ನು ಗಮನಿಸಿದೆ, ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದು ತಿಳಿಯುತ್ತದೆ. ಇದು ಅಂಬೇಡ್ಕರ್ ಮತ್ತು ದೇಶದ ಪ್ರತಿಯೊಬ್ಬ ನಾಗರೀಕನಿಗೆ ಮಾಡುತ್ತಿರುವ ಅಪಮಾನ ಎಂದು ಹೇಳಿದರು.
ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಾ ಮೀಸಲಾತಿಯನ್ನು ಕೊಲ್ಲುವ ಕೆಲಸವನ್ನು ಮಾಡುತ್ತಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶದಡಿಯಲ್ಲಿ ಜನರ ಧ್ವನಿಯಾಗಿ ಜನಪರ ಕಾಳಜಿಯಿಂದ ನುಡಿದಂತೆ ನಡೆಯುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರೂ ಆದ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಸಂವಿಧಾನವನ್ನು ಉಳಿಸಬೇಕಾದ ಅನಿವಾರ್ಯತೆ ಇದೆ. ಸಂವಿಧಾನದ ಅಂಗೀಕರಿಸಿದ ದಿನವನ್ನು ಹಬ್ಬದಂತೆ ಆಚರಣೆ ಮಾಡಬೇಕು. ದೇಶದ ಪ್ರತಿಯೊಬ್ಬ ಮಹನೀಯರನ್ನು ಜಾತಿ ಹೆಸರಿನಲ್ಲಿ ಸೀಮಿತಗೊಳಿಸಬಾರದು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮದ್ ನಯಾಜ್ ಮಾತನಾಡಿ, ಸಂವಿಧಾನವೂ ಭಾರತದ ಸರ್ವ ಧರ್ಮಗಳಿಗೂ ಪವಿತ್ರವಾದ ಗ್ರಂಥ. ಸಂವಿಧಾನದ ಉಳಿವಿಗಾಗಿ ಎಲ್ಲರೂ ಹೋರಾಟ ಮಾಡಲು ಸಿದ್ದರಿರಬೇಕೆಂದು ಕರೆ ನೀಡಿದರು.
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ, ಶೋಷಿತ ವರ್ಗದ ಧ್ವನಿಯಾಗಿ ನಿಂತವರು ಡಾ.ಬಿ.ಆರ್.ಅಂಬೇಡ್ಕರ್. ಸಂವಿಧಾನ ಬದಲಾಯಿಸುತ್ತೇವೆಂದ ಬಿಜೆಪಿ ನಾಯಕರು ಜನರಿಂದ ತಿರಸ್ಕೃತರಾಗಿ ಮೂಲೆ ಗುಂಪಾಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ದಲಿತರ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾಜಿ ರಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಮ ಮಂದಿರ ಹಾಗೂ ಸಂಸತ್ ಉದ್ಘಾಟನೆಗೆ ಕರೆಯದೆ ದಲಿತ ವಿರೋಧಿ ನೀತಿ ಪ್ರದರ್ಶನ ಮಾಡಿದ್ದಾರೆ. ಸಂವಿಧಾನ ಉಳಿಸಲು ಎಲ್ಲರೂ ಸಜ್ಜಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಕೆಪಿಸಿಸಿ ಸಂಶೋಧನಾ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಲಾಕೇಶ್, ಗಂಗಾಧರ್, ನಗರಸಭೆ, ಸಿಡಿಎ, ಆಶ್ರಯ ಸಮಿತಿ, ಗ್ಯಾರಂಟಿ ಸಮಿತಿ ಸದಸ್ಯರು ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
The Constitution has taught citizens how to live equally as Indians.
Leave a comment