ಚಿಕ್ಕಮಗಳೂರು: ಠೇವಣಿ ಇರಿಸಿದ ಹಣವನ್ನು ವಾಪಸು ನೀಡದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಠೇವಣಿ ಹಣ ಮತ್ತು ಉಳಿತಾಯ ಖಾತೆಯಲ್ಲಿರುವ ಹಣವನ್ನು ಬಡ್ಡಿ ಸಹಿತ ವಾಪಸು ನೀಡುವಂತೆ, ಜೊತೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು-ವೆಚ್ಚವನ್ನು ಠೇವಣಿದಾರರಿಗೆ ನೀಡುವಂತೆ ಸಂಘಕ್ಕೆ ಆದೇಶ ನೀಡಿದೆ.
ಚಿಕ್ಕಮಗಳೂರು ತಾಲ್ಲೂಕು ಬಿಳೇಕಲ್ಲು ನಿವಾಸಿ ಬಿ.ಆರ್.ಶಿವಶಂಕರ್ ಎಂಬುವವರು ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೫ ಲಕ್ಷ ರೂ.ಗಳನ್ನು ಠೇವಣಿಯನ್ನು ಇರಿಸಿದ್ದರು. ಜೊತೆಗೆ ಉಳಿತಾಯ ಖಾತೆಯಲ್ಲೂ ಹಣವಿತ್ತು. ಈ ಹಣವನ್ನು ವಾಪಸು ನೀಡುವಂತೆ ಕೋರಿದ್ದರೂ ಸಂಘವು ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಶಂಕರ್ ಸಂಘದ ವ್ಯವಸ್ಥಾಪಕರ ವಿರುದ್ಧ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಅಕ್ಟೋಬರ್ ೧೦ ರಂದು ತೀರ್ಪು ನೀಡಿದ್ದು, ಶಿವಶಂಕರ್ ಅವರು ಇರಿಸಿದ ಠೇವಣಿ ಮೊತ್ತ ೬ ಲಕ್ಷ ರೂ.ಗಳನ್ನು ೨೦೧೯ರ ಮಾರ್ಚ್ ೮ ರಿಂದ ಸಂಪೂರ್ಣ ಪಾವತಿಸುವವರೆಗೂ ಶೇ.೮.೫ರ ವಾರ್ಷಿಕ ಬಡ್ಡಿ ಸಹಿತ, ಉಳಿತಾಯ ಖಾತೆಯಲ್ಲಿರುವ ಮೊತ್ತ ೪,೭೫,೮೫೨ ರೂ.ಗಳನ್ನು ೨೦೧೯ರ ಅಕ್ಟೋಬರ್ ೧೦ ರಿಂದ ಸಂಪೂರ್ಣ ಪಾವತಿಸುವವರೆಗೆ ಶೇ.೬ರ ಬಡ್ಡಿ ಸಹಿತ ಹಾಗೂ ಪರಿಹಾರವಾಗಿ ೩೦ ಸಾವಿರ ರೂ. ಮತ್ತು ಖರ್ಚು-ವೆಚ್ಚವೆಂದು ೧೦ ಸಾವಿರ ರೂ.ಗಳನ್ನು ಶಿವಶಂಕರ್ ಅವರಿಗೆ ನೀಡುವಂತೆ ಸಂಘಕ್ಕೆ ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಬಮ್ಮನಕಟ್ಟಿ ಇವರುಗಳು ಈ ಆದೇಶವನ್ನು ನೀಡುವ ಮೂಲಕ ಇನ್ಶೂರೆನ್ಸ್ ಕಂಪನಿಯು ಸೇವಾ ನ್ಯೂನತೆ ಎಸಗಿರುವುದನ್ನು ಎತ್ತಿಹಿಡಿದು ಗ್ರಾಹಕರ ಹಿತರಕ್ಷಣೆ ಮಾಡಿದೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಕ.ವಿ.ಮಹಾಬಲ ಅವರು ವಾದ ಮಂಡಿಸಿದ್ದರು.
Order to pay deposit-savings account money with interest
Leave a comment