ಚಿಕ್ಕಮಗಳೂರು: ಒಪ್ಪಿಗೆ ಪಡೆಯದೆ ಗುಂಪು ಆರೋಗ್ಯ ವಿಮೆಗಾಗಿ ಹಣ ಕಡಿತಗೊಳಿಸಿ ಸೇವಾ ನ್ಯೂನತೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಹಾಗೂ ಇನ್ಶೂರೆನ್ಸ್ ಕಂಪನಿಗಳ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಸಹಿತ ಹಣ ಮರಳಿಸುವಂತೆ ಕಂಪನಿಗಳಿಗೆ ಆದೇಶ ನೀಡಿದೆ.
ನಗರದ ಕೋಟೆ ಚೆನ್ನಾಪುರದ ಎ,ಪಿ.ನಾಗೇಶ್ ಗೌಡ ಎಂಬುವವರು ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ವಸ್ತಾರೆ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ನಾಗೇಶ್ ಗೌಡರ ಖಾತೆಯಿಂದ ತಲಾ ೭೬,೭೯೩ ರೂ.ಗಳಂತೆ ಒಟ್ಟು ೧,೫೩,೫೮೬ ರೂ.ಗಳನ್ನು ಕಡಿತಗೊಳಿಸಿದ್ದು, ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ ಅವರು ಈ ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ ಹಣ ಮರಳಿಸದೆ ಸೇವಾ ನ್ಯೂನತೆ ಎಸಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು, ಹೆಚ್ಡಿಎಫ್ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿಯ ಮಂಗಳೂರು ಹಾಗೂ ಬೆಂಗಳೂರು ಕಚೇರಿಯ ವ್ಯವಸ್ಥಾಪಕರುಗಳು ಹಾಗೂ ಈ ಸಂಸ್ಥೆಯ ಕಾರ್ಯಾಚರಣೆ ಮತ್ತು ಸೇವಾ ಗುಂಪಿನ ಹಿರಿಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರ ವಿರುದ್ಧ ಕಳೆದ ಡಿಸೆಂಬರ್ ೪ ರಂದು ನಾಗೇಶ್ಗೌಡ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಇತ್ತೀಚೆಗೆ ತೀರ್ಪು ನೀಡಿ ವಿಮೆ ಮೊತ್ತವಾದ ಎರಡು ಬಾರಿ ಖಾತೆಯಿಂದ ಕಡಿತಗೊಳಿಸಿದ ಒಟ್ಟು ಮೊತ್ತ ೧,೫೩,೫೮೬ ರೂ.ಗಳನ್ನು ಶೇ.೯ರ ವಾರ್ಷಿಕ ಬಡ್ಡಿ ಸಹಿತ ದೂರುದಾರರಿಗೆ ಮರಳಿಸುವಂತೆ ಹಾಗೂ ಪರಿಹಾರವಾಗಿ ೨೦ ಸಾವಿರ ರೂ.ಗಳು ಮತ್ತು ಪ್ರಕರಣದ ಖರ್ಚು-ವೆಚ್ಚಕ್ಕಾಗಿ ೧೦ ಸಾವಿರ ರೂ.ಗಳನ್ನು ನೀಡುವಂತೆ ಆದೇಶ ನೀಡಿದೆ.
Service deficiency allegation: refund order with interest
Leave a comment