ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತವೆಸಗಿದ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಜುಲೈ 2 ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗಾಯಾಳು ಲೋಹಿತ್ ಅವರು ಅನ್ನಪೂರ್ಣ ಆಸ್ಪತ್ರೆಯಿಂದ ನೀಡಿದ ದೂರಿನನ್ವಯ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ದೂರುದಾರರಾದ ಲೋಹಿತ್ ಹಾಗೂ ಅವರ ಸಂಬಂಧಿಕರಾದ ರಮೇಶ್ ಮತ್ತು ವಿಕಾಸ್ ಅವರು ಗಡಬನಹಳ್ಳಿಯಲ್ಲಿ ನಡೆದ ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ವಾಪಸ್ ಮನೆಗೆ ಮರಳುತ್ತಿದ್ದರು. ಕಾರನ್ನು ವಿಕಾಸ್ ಚಾಲನೆ ಮಾಡುತ್ತಿದ್ದರೆ, ಮುಂದಿನ ಸೀಟಿನಲ್ಲಿ ರಮೇಶ್ ಹಾಗೂ ಹಿಂಭಾಗದ ಸೀಟಿನಲ್ಲಿ ಲೋಹಿತ್ ಕುಳಿತಿದ್ದರು
ಕಾರು ಚಿಕ್ಕಮಗಳೂರು ನಗರದ ಗವನಹಳ್ಳಿ ಶಾಲೆಯ ಮುಂಭಾಗ ಬರುತ್ತಿದ್ದಂತೆ, ಎದುರಿನಿಂದ ಒನ್-ವೇನಲ್ಲಿ ಬಂದ ಮತ್ತೊಂದು ಕಾರಿನ (KA 18 MA 7664) ಚಾಲಕ ತನ್ನ ವಾಹನವನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿಕೊಂಡು ಬಂದು ಇವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ.
ಮೂವರಿಗೆ ಗಂಭೀರ ಗಾಯ: ಢಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿವೆ: ಲೋಹಿತ್: ಎರಡು ಕೈಗಳು, ಸೊಂಟ ಹಾಗೂ ತಲೆಗೆ ಪೆಟ್ಟಾಗಿದೆ.
ವಿಕಾಸ್ (ಚಾಲಕ): ತಲೆ, ಮೈಕೈ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ. ರಮೇಶ್: ತಲೆ, ಎದೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಚಿಕ್ಕಮಗಳೂರು ಸರ್ಕಾರಿ ಎಂ.ಜಿ. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಕಾಸ್ ಮತ್ತು ರಮೇಶ್ ಅವರನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಕಾರಣ, ಮತ್ತೊಬ್ಬ ಗಾಯಾಳು ಲೋಹಿತ್ ಅವರು ಚಿಕ್ಕಮಗಳೂರಿನ ಖಾಸಗಿ ಅನ್ನಪೂರ್ಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಎಸಗಿದ ಕಾರಿನ ಚಾಲಕ ಅಪಘಾತದ ತೀವ್ರತೆಗೆ ಹೆದರಿ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾನೆ. ಸದ್ಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಚಾಲಕನ ಪತ್ತೆಗಾಗಿ ಜಾಲ ಬೀಸಿದ್ದಾರೆ.
Terrible road accident near Gavanahalli school late at night
Leave a comment