ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಕನಕ ಎಂಬ ಭಿಕ್ಷುಕಿ ಮಹಿಳೆಯನ್ನು ಕೊಲೆ ಮಾಡಿದ ನಗರದ ರಾಮನಹಳ್ಳಿಯ ಎಸ್.ಆರ್.ಪೂರ್ಣೇಶ್ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ೨೦೨೪ರ ಮೇ ೧೦ ರಂದು ಬೆಳಗ್ಗಿನ ಜಾವ ೨.೩೦ರ ಸುಮಾರಿಗೆ ಇಲ್ಲಿನ ಐ.ಜಿ.ರಸ್ತೆಯ ಗೋಡೆ ಪಕ್ಕದಲ್ಲಿ ಮಲಗಿದ್ದ ಕನಕ ಅವರನ್ನು ಎಚ್ಚರಿಸಿ ತನ್ನ ಕಾಲನ್ನು ಒತ್ತುವಂತೆ ಒತ್ತಾಯಿಸಿದ ಎನ್ನಲಾಗಿದೆ.
ಇದಕ್ಕೆ ಕನಕ ನಿರಾಕರಿಸಿದ್ದರಿಂದ ಕೋಪಗೊಂಡ ಆರೋಪಿ ಪೂರ್ಣೇಶ್ ಸೈಜುಕಲ್ಲನ್ನು ಆಕೆಯ ತಲೆಯ ಮೇಲೆ ಎತ್ತಿಹಾಕಿದ. ಈ ಸಂದರ್ಭದಲ್ಲಿ ಬಿಡಿಸಲು ಹತ್ತಿರ ಬರುವ ಪ್ರಯತ್ನ ಮಾಡಿದವರ ಮೇಲೂ ಕಲ್ಲು ಎತ್ತಿಹಾಕುವ ಬೆದರಿಕೆ ಹಾಕಿದ ಎಂದು ಹೇಳಲಾಗಿದೆ. ಆದರೂ ಆತನನ್ನು ಸ್ಥಳದಿಂದ ಓಡಿಸಿದ ಸ್ಥಳೀಯ ಇಬ್ಬರು, ತಲೆಯ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಆಕೆ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.
ಘಟನೆಯ ಹಿನ್ನೆಲೆಯಲ್ಲಿ ನಗರ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆಯನ್ನು ನಡೆಸಿ ವಾದವಿವಾದಗಳನ್ನು ಆಲಿಸಿದ ಬಳಿಕ ಆರೋಪಿಯು ಮಾಡಿರುವ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಆರೋಪಿಗೆ ಕಲಂ ೩೦೨ ರಡಿ ಜೀವಾವಧಿ ಶಿಕ್ಷೆ ಹಾಗೂ ೮೧ ಸಾವಿರ ರೂ. ದಂಡ ವಿಧಿಸಿ ಜುಲೈ ೧ ರಂದು ತೀರ್ಪು ಪ್ರಕಟಿಸಿದ್ದಾರೆ. ದಂಡದ ಮೊತ್ತವನ್ನು ದೂರುದಾರರಿಗೆ ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಲೋಹಿತಾಶ್ವಾಚಾರ್ ಅವರು ವಾದ ಮಂಡಿಸಿದ್ದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ (ಪ್ರ) ಜಾನ್ ಅಂಡ್ ಡಿಸೋಜಾ ತನಿಖೆಯನ್ನು ಪೂರ್ಣಗೊಳಿಸಿದ್ದು, ಪೊಲೀಸ್ ನಿರೀಕ್ಷಕ ರೇಣುಕಾ ಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ತನಿಖಾ ಸಹಾಯಕ ಎಎಸ್‌ಐ ಸಿ.ಆರ್.ರಮೇಶಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿಯಾಗಿ ಹೆಚ್‌ಸಿ ಕೆ.ಎನ್.ಬಸವರಾಜು, ಪ್ರೋಸೆಸ್ ಕರ್ತವ್ಯವನ್ನು ಪಿಸಿ ವಿಶ್ವನಾಥ್ ಸಮರ್ಪಕವಾಗಿ ನಿರ್ವಹಿಸಿದ್ದರು.
Life sentence for accused of murdering beggar
Leave a comment