ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಜಲಮೂಲಗಳಲ್ಲಿ ಸಂಭವಿಸಬಹುದಾದ ಪ್ರವಾಹ ಹಾಗೂ ತುರ್ತು ಪರಿಸ್ಥಿತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸುವ ಮತ್ತು ಸಾರ್ವಜನಿಕರ ಜೀವ ರಕ್ಷಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ರಕ್ಷಣಾ ಅಣಕು ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಖುದ್ದಾಗಿ ಭಾಗವಹಿಸಿ ಇಡೀ ಪ್ರಕ್ರಿಯೆಯನ್ನು ವೀಕ್ಷಿಸಿದರು. ಅವರೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಸೇರಿದಂತೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಾಚರಣೆಯ ವೇಳೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹಾಗೂ ನುರಿತ ಸಿಬ್ಬಂದಿಗಳು ರಕ್ಷಣಾ ಬೋಟ್ಗಳು ಮತ್ತು ಜೀವ ರಕ್ಷಕ ಸಲಕರಣೆಗಳನ್ನು ಬಳಸಿಕೊಂಡು, ಪ್ರವಾಹದಲ್ಲಿ ಸಿಲುಕಿದವರನ್ನು ಹೇಗೆ ಸುರಕ್ಷಿತವಾಗಿ ದಡಕ್ಕೆ ತರಬೇಕು ಎಂಬುದನ್ನು ಅತ್ಯಂತ ರೋಮಾಂಚಕವಾಗಿ ಪ್ರದರ್ಶಿಸಿದರು.
ವಿಪತ್ತು ನಿರ್ವಹಣೆಯಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸಲು ಈ ತರಬೇತಿ ರೂಪದ ಅಣಕು ಪ್ರದರ್ಶನವು ಸಹಕಾರಿಯಾಯಿತು.
Mock demonstration to deal with flood situation
Leave a comment