Home namma chikmagalur chikamagalur ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ
chikamagalurHomeLatest Newsnamma chikmagalur

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

Share
Share

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ತಿಳಿಸಿದರು.

ನಗರದ ನ್ಯಾಯಾಲಯ ಸಂಕೀರ್ಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು ೪೩,೮೨೧ ಪ್ರಕರಣಗಳು ಬಾಕಿ ಇವೆ. ಈ ಪೈಕಿ ಕೆಲವು ಘೋರ ಅಪರಾಧದ ಪ್ರಕರಣಗಳನ್ನು ರಾಜಿ ಮಾಡಲು ಬರುವುದಿಲ್ಲ. ಆದರೆ, ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳಲ್ಲಿ ಕನಿಷ್ಠ ಶೇ.೧೦ ರಿಂದ ಶೇ.೧೫-೨೦ರಷ್ಟು ಪ್ರಕರಣಗಳನ್ನು ಅಂದರೆ ಸುಮಾರು ೭ ರಿಂದ ೮ ಸಾವಿರ ಕೇಸುಗಳನ್ನು ಈ ಬಾರಿ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಜುಲೈ ೧೧ ರಂದು ನ್ಯಾಯಾಲಯಕ್ಕೆ ರಜಾ ದಿನವಾಗಿದ್ದರೂ ಸಹ, ಸಾರ್ವಜನಿಕರ ಹಿತದೃಷ್ಟಿಯಿಂದ ಅಂದು ಲೋಕ್ ಅದಾಲತ್ ನಡೆಸಲಾಗುತ್ತಿದೆ. ರಜಾ ದಿನದಂದು ಇದು ನಡೆಯುವುದರಿಂದ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಲುಪಬೇಕಿದೆ. ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಸಿಕ್ಕರೆ ಅವರು ನ್ಯಾಯಾಲಯಕ್ಕೆ ಬಂದು ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜಿ ಸಂಧಾನದ ಮೂಲಕ ಪ್ರಕರಣಗಳು ಬಗೆಹರಿದರೆ ನ್ಯಾಯಾಲಯಗಳ ಮೇಲಿನ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ ಮತ್ತು ಕಕ್ಷಿದಾರರಿಗೂ ಒಳ್ಳೆಯದಾಗುತ್ತದೆ. ಸುದೀರ್ಘ ಕಾನೂನು ಹೋರಾಟ ತಪ್ಪಿ, ಕಕ್ಷಿದಾರರಿಗೆ ಶೀಘ್ರ ನ್ಯಾಯ ಸಿಗಲಿದ್ದು, ಇದು ಅವರಿಗೆ ಹೆಚ್ಚು ಅನುಕೂಲಕರವಾಗಿದೆ. ಇದು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ ಮಾತನಾಡಿ, ಸಾರ್ವಜನಿಕರು ಹಾಗೂ ಕಕ್ಷಿದಾರರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರೀ-ಲಿಟಿಗೇಷನ್ ಪ್ರಕರಣಗಳನ್ನು ಪರಸ್ಪರ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಜುಲೈ ೧೧ ರಂದು ಜಿಲ್ಲಾದ್ಯಂತ ‘ರಾಷ್ಟ್ರೀಯ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ದಾವೆಗಳನ್ನು ಹಾಗೂ ಕೋರ್ಟ್‌ಗೆ ದಾಖಲಿಸುವ ಮುನ್ನವೇ ಇತ್ಯರ್ಥಪಡಿಸಬಹುದಾದ (ಪ್ರೀ-ಲಿಟಿಗೇಷನ್) ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಈ ಅದಾಲತ್ ಅತ್ಯುತ್ತಮ ಅವಕಾಶ ಕಲ್ಪಿಸಲಿದೆ. ರಾಜಿ ಮಾಡಿಕೊಂಡ ಪ್ರಕರಣಗಳಿಗೆ ಪಾವತಿಸಲಾದ ಸಂಪೂರ್ಣ ಕೋರ್ಟ್ ಶುಲ್ಕವನ್ನು ಕಕ್ಷಿದಾರರಿಗೆ ಮರುಪಾವತಿಸಲಾಗುವುದು. ಇದು ಉಭಯ ಕಕ್ಷಿದಾರರಿಗೂ ಜಯ ತಂದುಕೊಡುವ ಪ್ರಕ್ರಿಯೆಯಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ವಿವರಿಸಿದರು.

ಪ್ರಸಕ್ತ ತಿಂಗಳ ಮೂರನೇ ಶನಿವಾರದಂದು ‘ಚೆಕ್ ಬೌನ್ಸ್’ (ಎನ್‌ಐ ಆಕ್ಟ್) ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಇದರೊಂದಿಗೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನ್ಯ ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಜಿಲ್ಲಾ ಮತ್ತು ತಾಲ್ಲೂಕುವಾರು ವಿಂಗಡಿಸಿ ಇತ್ಯರ್ಥಕ್ಕಾಗಿ ಕಳುಹಿಸಿಕೊಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು ೪೨ ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇವುಗಳ ಇತ್ಯರ್ಥಕ್ಕಾಗಿ ಆಗಸ್ಟ್ ೨೧, ೨೨ ಮತ್ತು ೨೩ ರಂದು ಮೂರು ದಿನಗಳ ಕಾಲ ‘ಸಮಾಧಾನ್ ಸಮಾರೋಹ್’ ವಿಶೇಷ ಸಂಧಾನ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಈ ಪ್ರಕರಣಗಳ ರಾಜಿಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಒಬ್ಬರು ಜಿಲ್ಲಾ ನ್ಯಾಯಾಧೀಶರು, ಒಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಒಬ್ಬರು ಕಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಧ್ಯಸ್ಥಿಕೆಗಾರರು ಇರಲಿದ್ದಾರೆ.

ಈ ತಂಡವು ಉಭಯ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿ, ಮಧ್ಯಸ್ಥಿಕೆಗಾರರ ಮೂಲಕ ಸಂಧಾನ ಸಭೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಿದೆ. ಇಲ್ಲಿ ರಾಜಿಯಾದ ಪ್ರಕರಣಗಳನ್ನು ಮರಳಿ ಸುಪ್ರೀಂ ಕೋರ್ಟ್‌ಗೆ ಕಳುಹಿಸಿಕೊಡಲಾಗುತ್ತದೆ. ಇನ್ನು ಯಾವುದಾದರೂ ಕಕ್ಷಿದಾರರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ರಾಜಿ ಮಾಡಿಕೊಳ್ಳಲು ವಿಶೇಷ ತಾಂತ್ರಿಕ ಸೌಲಭ್ಯ ಕಲ್ಪಿಸಿಕೊಡಲಾಗುವುದು.

ಪ್ರಸ್ತುತ ಪಟ್ಟಿಯಲ್ಲಿರುವ ೪೨ ಪ್ರಕರಣಗಳ ಹೊರತಾಗಿ, ಜಿಲ್ಲೆಯ ಇತರೆ ಯಾರದೇ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಅವುಗಳನ್ನು ರಾಜಿ ಮಾಡಿಕೊಳ್ಳಲು ಕಕ್ಷಿದಾರರು ಸಿದ್ಧರಿದ್ದರೆ, ಅವರು ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅಂತಹ ಪ್ರಕರಣಗಳನ್ನೂ ಸಹ ಈ ವಿಶೇಷ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಹನುಮಂತಪ್ಪ ಅವರು, ಕಕ್ಷಿದಾರರು ಹಾಗೂ ಸಾರ್ವಜನಿಕರು ಯಾವುದೇ ಕಟುತ್ವವಿಲ್ಲದೆ, ಸುಲಭ ಹಾಗೂ ಉಚಿತವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಈ ಲೋಕ ಅದಾಲತ್‌ಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷರಾದ ಸುಜೇಂದ್ರ ಮಾತನಾಡಿ, ಸಾರ್ವಜನಿಕರು ನ್ಯಾಯಾಲಯಗಳಲ್ಲಿ ವರ್ಷಗಟ್ಟಲೆ ಅಲೆಯುವುದನ್ನು ತಪ್ಪಿಸಿ, ಹಣ ಹಾಗೂ ಸಮಯವನ್ನು ಉಳಿಸುವ ಉದ್ದೇಶದಿಂದ ಇದೇ ಜುಲೈ ೧೧ ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ರಾಜಿ ಸಂಧಾನದ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದಾದ ಪ್ರಕರಣಗಳ ಇತ್ಯರ್ಥಕ್ಕೆ ಸಾರ್ವಜನಿಕರು ಈ ಸದವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು

ಚಿಕ್ಕಮಗಳೂರು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಜಿ ಮಾಡಿಕೊಳ್ಳಬಹುದಾದ ಒಟ್ಟು ೩,೨೧೫ ವಿವಿಧ ರೀತಿಯ ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತ್‌ಗಾಗಿ ಗುರುತಿಸಲಾಗಿದೆ. ಉಭಯ ಕಕ್ಷಿದಾರರು ಪರಸ್ಪರ ಒಪ್ಪಿಗೆಯೊಂದಿಗೆ ಇವುಗಳನ್ನು ಸಂಧಾನಕಾರರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ನ್ಯಾಯಾಲಯಗಳಿಗೆ ಪದೇಪದೇ ಅಲೆದಾಡುವುದರಿಂದ ಆಗುವ ಆರ್ಥಿಕ ನಷ್ಟ ಹಾಗೂ ಸಮಯದ ವ್ಯಯವನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ.

ಇಲ್ಲಿ ಪ್ರಕರಣಗಳು ಇತ್ಯರ್ಥಗೊಂಡರೆ ಕಕ್ಷಿದಾರರು ಈಗಾಗಲೇ ಪಾವತಿಸಿರುವ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುತ್ತದೆ. ಅಲ್ಲದೆ, ಇಲ್ಲಿ ಕಕ್ಷಿದಾರರ ಒಪ್ಪಿಗೆಯ ಮೇರೆಗೆ ತೀರ್ಪು ನೀಡುವುದರಿಂದ ಮುಂದೆ ಇದರ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇದು ಕಕ್ಷಿದಾರರು ಪರಸ್ಪರ ದ್ವೇಷ ಸಾಧನೆ ಬಿಟ್ಟು ಸ್ನೇಹ ಮತ್ತು ಸೌಹಾರ್ದತೆಯಿಂದ ಜೀವನ ನಡೆಸಲು ಸಹಕಾರಿಯಾಗಲಿದೆ.

ಈ ಬಾರಿಯ ಲೋಕ ಅದಾಲತ್ ಅನ್ನು ಯಶಸ್ವಿಗೊಳಿಸಲು ಚಿಕ್ಕಮಗಳೂರು ವಕೀಲರ ಸಂಘವು ಸಂಪೂರ್ಣ ಸಹಕಾರ ನೀಡುತ್ತಿದೆ. ನ್ಯಾಯಾಧೀಶರು ಹಾಗೂ ಸಂಧಾನಕಾರರ ಸಮ್ಮುಖದಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಕಕ್ಷಿದಾರರು ಮುಕ್ತವಾಗಿ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ನ್ಯಾಯಾಲಯಗಳಲ್ಲಿ ತಿರುಗಿ ತಮ್ಮ ದುಡಿಮೆ ಹಾಗೂ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು ಕಕ್ಷಿದಾರರು ಜುಲೈ ೧೧ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಭಾಗವಹಿಸಿ, ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಕೋರಿದರು.

More than 43 thousand cases are pending in the district.

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...

ಪ್ರೀತಿ ನಿರಾಕರಣೆ : ಬಾಲಕಿ ಮೇಲೆ ಹಲ್ಲೆ

ಚಿಕ್ಕಮಗಳೂರು: ಕಾಫಿನಾಡಿನ ಹೃದಯ ಭಾಗದಲ್ಲಿರುವ ಎಸ್ಪಿ ಮತ್ತು ಡಿಸಿ ಕಚೇರಿ ಪಕ್ಕದಲ್ಲೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ...