ಚಿಕ್ಕಮಗಳೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಬದುಕು ಮತ್ತು ಭವಿಷ್ಯದ ಕುರಿತು ಸಮಗ್ರ ಚಿಂತನೆ ನಡೆಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಕರ್ನಾಟಕ ವಿಕಾಸ ರಂಗದ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ಅ.14ರಂದು ಕನ್ನಡ ನಾಡು-ನುಡಿ ವಿಚಾರ ಸಂಕಿರಣ ಮತ್ತು ಕನ್ನಡ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.14ರ ಬುಧವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ನಾಡು-ನುಡಿ ಹಾಗೂ ಕನ್ನಡಿಗರ ಬದುಕು ಮತ್ತು ಭವಿಷ್ಯ ಹಲವು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಿಗರ ಅಸ್ಮಿತೆಯ ಕುರಿತು ಮರುಚಿಂತನೆ ನಡೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಮುಖಾಮುಖಿಯಾಗಿ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ವಿಚಾರ ಸಂಕಿರಣದ ಮೊದಲ ಅಧಿವೇಶನದಲ್ಲಿ ‘ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಮತ್ತು ಕನ್ನಡಿಗರ ಅಸ್ಮಿತೆ’ ಹಾಗೂ ‘ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪಾತ್ರ’ ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದು ಭಾಷೆಯ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಎಐ ತಂತ್ರಜ್ಞಾನದ ಕೌಶಲ್ಯಗಳನ್ನು ಕನ್ನಡದಲ್ಲಿ ಬೆಳೆಸುವುದು ಹಾಗೂ ತಂತ್ರಜ್ಞಾನದ ಬಳಕೆಯಿಂದ ಕನ್ನಡ ಭಾಷೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಎರಡನೇ ಅಧಿವೇಶನದಲ್ಲಿ ‘ಕನ್ನಡಿಗರ ಬದುಕು ಮತ್ತು ಭವಿಷ್ಯ’ ವಿಷಯದಡಿ ಕೇಂದ್ರ ಸರ್ಕಾರಿ ಉದ್ಯಮಗಳು ಹಾಗೂ ಇಲಾಖೆಗಳಲ್ಲಿ ಕನ್ನಡಿಗರಿಗೆ ದೊರೆಯುತ್ತಿರುವ ಉದ್ಯೋಗಾವಕಾಶಗಳು, ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳು ದೊರೆಯುತ್ತಿವೆಯೇ ಎಂಬ ಬಗ್ಗೆ ಚರ್ಚಿಸಲಾಗುವುದು.
ಬಹುರಾಷ್ಟ್ರೀಯ ಕಂಪನಿಗಳು ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಯಾವ ರೀತಿಯ ಆದ್ಯತೆ ನೀಡುತ್ತಿವೆ ಎಂಬ ಪ್ರಶ್ನೆಯೂ ಮಹತ್ವದ್ದಾಗಿದೆ. ಕನ್ನಡಿಗರು ತಮ್ಮ ನೆಲದಲ್ಲಿಯೇ ಭಾಷೆ, ಉದ್ಯೋಗ ಮತ್ತು ಸಾಂಸ್ಕೃತಿಕ ಅಸ್ಮಿತೆಯಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಗತ್ಯ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದರು.
ಮೂರನೇ ಅಧಿವೇಶನದಲ್ಲಿ ಸ್ಥಳೀಯ ಲೇಖಕರ ಸಾಹಿತ್ಯ ಕೃತಿಗಳ ಪರಿಚಯ ಮತ್ತು ವಿಮರ್ಶಾತ್ಮಕ ಚರ್ಚೆ ನಡೆಯಲಿದೆ. ಸ್ಥಳೀಯ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ, ಅವರ ಕೃತಿಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಸ್ಥಳೀಯ ಸಾಹಿತಿಗಳನ್ನು ಗೌರವಿಸುವ ಉದ್ದೇಶ ಹೊಂದಲಾಗಿದೆ. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮನೋಭಾವದಿಂದ ಹೊರಬಂದು ನಮ್ಮ ನೆಲದ ಸಾಹಿತ್ಯ ಮತ್ತು ಪ್ರತಿಭೆಗಳಿಗೆ ಸೂಕ್ತ ಮನ್ನಣೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಕರ್ನಾಟಕ ರಾಜ್ಯ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೆ.ಎ.ಬಿ. ರಾಮಚಂದ್ರಪ್ಪ ಹಾಗೂ ಡಾ. ರವಿಕುಮಾರ ನೀಹ ಪಾಲ್ಗೊಳ್ಳಲಿದ್ದಾರೆ. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಸ್ಥಳೀಯ ಶಾಸಕರಾದ ಡಾ. ರವಿ ಸಿ.ಟಿ., ಎ.ವಿ. ಗಾಯತ್ರಿ ಶಾಂತೇಗೌಡ ಹಾಗೂ ಎಸ್.ಎಲ್. ಭೋಜೇಗೌಡ ಆಗಮಿಸಲಿದ್ದಾರೆ. ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳ ಕನ್ನಡ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿಕಾಂತ್ ಹಾಗೂ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
Seminar on the Kannada land language and the lives and future of Kannadigas on October 14.
Leave a comment