ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸತೀಶ್ ಪಾತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನ ಜೆ.ಪಿ. ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ ಮೂಲದ ಮಹಿಳೆಯೊಬ್ಬರು ಕೊಪ್ಪ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ತೀರ್ಥಹಳ್ಳಿ ತಾಲೂಕಿನ ಕುದುರೆಗುಂಡಿಗೆ ಮಹಿಳೆಯನ್ನು ಕರೆದೊಯ್ದು, ಭೂತ-ದೆವ್ವ ಬಿಡಿಸುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಸತೀಶ್ ಪಾತ್ರಿಯ ಮೇಲಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಇದಲ್ಲದೆ, ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ. ಬ್ಲಾಕ್ ಮ್ಯಾಜಿಕ್ (ಮಾಟ-ಮಂತ್ರ) ಸಂಬಂಧಿತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿ, ಎನ್.ಆರ್.ಪುರ ಪೊಲೀಸ್ ಠಾಣೆಯ ಪೇದೆ ಕಾಂತೇಶ್ ಅವರಿಂದ ಪೊಲೀಸರ ಚಲನವಲನದ ಮಾಹಿತಿ ಪಡೆಯುತ್ತಿದ್ದ ಎಂಬ ಆರೋಪವೂ ಬೆಳಕಿಗೆ ಬಂದಿದೆ. ಪೊಲೀಸರು ತನ್ನನ್ನು ಬಂಧಿಸಲು ಬರುತ್ತಿರುವ ಮಾಹಿತಿ ಮುಂಚಿತವಾಗಿ ತಿಳಿದುಕೊಂಡು ಸ್ಥಳ ಬದಲಾಯಿಸುತ್ತಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪೇದೆ ಕಾಂತೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅಮಾನತುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಎನ್.ಆರ್.ಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Satish Patri arrested on charges of rape under the pretext of exorcism.
Leave a comment