Home namma chikmagalur chikamagalur ಬಾಬಾ ಬುಡನ್ ದರ್ಗಾ ವಿವಾದ: ಪೊಲೀಸರ ‘ಬಿ’ ರಿಪೋರ್ಟ್‌ಗೆ ಆಕ್ಷೇಪ
chikamagalurHomeLatest Newsnamma chikmagalur

ಬಾಬಾ ಬುಡನ್ ದರ್ಗಾ ವಿವಾದ: ಪೊಲೀಸರ ‘ಬಿ’ ರಿಪೋರ್ಟ್‌ಗೆ ಆಕ್ಷೇಪ

Share
Oplus_153223168
Share

ಚಿಕ್ಕಮಗಳೂರು: ಚಿಕ್ಕಮಗಳೂರಿನ ಐತಿಹಾಸಿಕ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದಿದೆಯೆನ್ನಲಾದ ಅಕ್ರಮ ಕೃತ್ಯಗಳ ಕುರಿತು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ‘ಬಿ’ ಫೈನಲ್ ವರದಿಯನ್ನು ವಿರೋಧಿಸಿ, ನ್ಯಾಯಾಲಯದಲ್ಲಿ ಪ್ರೊಟೆಸ್ಟ್ ಪೆಟಿಷನ್ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದಾದಾ ಪಹಾಡ್ ಮತ್ತು ಬಾಬಾ ಬುಡನ್ ದರ್ಗಾ ಹೆರಿಟೇಜ್ ಕೌನ್ಸಿಲ್ ಅಧ್ಯಕ್ಷ ತನ್ವೀರ್ ಅಹ್ಮದ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾದ ಪಾವಿತ್ರ್ಯ, ಐತಿಹಾಸಿಕ ಪರಂಪರೆ ಹಾಗೂ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆಗಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದರು.

2025ರ ಸೆಪ್ಟೆಂಬರ್ 14ರಂದು ದರ್ಗಾದ ಪವಿತ್ರ ಗುಹೆಯೊಳಗೆ ಕೆಲವರು ವಿಗ್ರಹವನ್ನು ತಂದು ಪೂಜೆ ನಡೆಸುವ ಮೂಲಕ ದರ್ಗಾದ ಸಂಪ್ರದಾಯ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ನಮ್ಮ ಆರೋಪವಾಗಿದೆ. ಈ ಕುರಿತು ದೂರು ನೀಡಲು ಸೆಪ್ಟೆಂಬರ್ 15ರಂದು ತೆರಳಿದಾಗ ಸಂಬಂಧಪಟ್ಟ ತನಿಖಾಧಿಕಾರಿಗಳು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಕ್ರೈಂ ನಂ. 008/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ವಿವರಿಸಿದರು.

ಘಟನೆಗೆ ಸಂಬಂಧಿಸಿದ ವಿಡಿಯೋ ಸೇರಿದಂತೆ ಸಾಕ್ಷ್ಯಗಳು ತಮ್ಮ ಬಳಿ ಇದ್ದರೂ, ಅಂದಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಂತಿ-ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದರು. ಅಧಿಕಾರಿಗಳ ಭರವಸೆಯನ್ನು ಗೌರವಿಸಿ ವಿಡಿಯೋ ಬಹಿರಂಗಪಡಿಸದೆ ಕಾನೂನು ಹೋರಾಟ ಮುಂದುವರಿಸಿದ್ದೆವು. ಆದರೆ, ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಪರಿಗಣಿಸದೆ ‘ಬಿ’ ಫೈನಲ್ ವರದಿ ಸಲ್ಲಿಸಿರುವುದು ಆಕ್ಷೇಪಾರ್ಹವಾಗಿದೆ ಎಂದು ಹೇಳಿದರು.

ದರ್ಗಾದ ಪವಿತ್ರ ಗುಹೆಯಲ್ಲಿ ಸಮಾಧಿಗಳು, ಗೋರಿಗಳು ಹಾಗೂ ಕಬರಸ್ತಾನ ಇರುವುದರಿಂದ ಅಲ್ಲಿ ವಿಗ್ರಹ ಪೂಜೆ ನಡೆಸಿರುವುದು ಧಾರ್ಮಿಕ ಸಂಪ್ರದಾಯ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂಬುದು ಕೌನ್ಸಿಲ್‌ನ ವಾದವಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ತಮ್ಮ ಆಕ್ಷೇಪಣೆಗಳನ್ನು ಮಂಡಿಸುವುದಾಗಿ ತಿಳಿಸಿದರು.

ಇದೇ ವೇಳೆ, ಮುಜರಾಯಿ ಇಲಾಖೆಯಡಿ ಕಾರ್ಯನಿರ್ವಹಿಸುವ ದರ್ಗಾದ ವ್ಯವಸ್ಥಾಪನಾ ಸಮಿತಿಗೆ ಅರ್ಚಕರೊಬ್ಬರನ್ನು ಸದಸ್ಯರನ್ನಾಗಿ ನೇಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದ ದರ್ಗಾದ ಮೂಲ ಸ್ವರೂಪ ಮತ್ತು ಪರಂಪರೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಹೇಳಿದರು. ಈ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದರು.

ದರ್ಗಾದ ಐತಿಹಾಸಿಕ ಪರಂಪರೆ ಮತ್ತು ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ ಹಾಗೂ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಆರೋಪಿಸಲಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ದಾದಾ ಪಹಾಡ್ ಮತ್ತು ಬಾಬಾ ಬುಡನ್ ದರ್ಗಾ ಹೆರಿಟೇಜ್ ಕೌನ್ಸಿಲ್ ವತಿಯಿಂದ ಮಂಗಳವಾರ (ಅ. 13) ಬೆಳಿಗ್ಗೆ 10 ಗಂಟೆಗೆ ನಗರದ ಆಜಾದ್ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಧಾರ್ಮಿಕ ಮುಖಂಡರು ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಾಬಾ ಬುಡನ್ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾಖಾದ್ರಿ, ಆರಿಫ್, ಮಹಮ್ಮದ್ ಅತೀಖ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Baba Budan Dargah dispute: Objection to police ‘B’ report

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು ತಾಲೂಕಿನ ಗಡಿಭಾಗದ ಬಯಲುಸೀಮೆ ರೈತರಿಗೆ ಪುನರ್ಜನ್ಮ ನೀಡಿದೆ. ಅಂತರಘಟ್ಟೆ ಕೆರೆ, ಕಲ್ಕೆರೆಯ ಕುಕ್ಕಸಮುದ್ರ ಕೆರೆಗಳು...

ಮಹೇಶ್ ಜೋಷಿಗೆ ಹಿನ್ನೆಡೆ-ಮತ್ತೆ ಕೋರ್ಟ್ ನಲ್ಲಿ ಹೋರಾಟಕ್ಕೆ ಜಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಆಡಳಿತಾತ್ಮಕ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಪರಿಷತ್‌ನ ಸದಸ್ಯರು ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ...

Related Articles

ತರೀಕೆರೆ ಡಿ. ಸುರೇಶ್‌ಗೆ ಮೈಸೂರು ದಸರಾ ಗೌರವ

ತರೀಕೆರೆ: ತಮ್ಮ ವಿಶಿಷ್ಟ ಕುಂಚದ ಕಲಾ ಶೈಲಿಯ ಮೂಲಕ ಕಲಾ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ತರೀಕೆರೆಯ...

ಪ್ರಧಾನ ಮಂತ್ರಿ ವಿಕಸಿತ ಭಾರತ ಸಂಕಲ್ಪದಡಿ ತರೀಕೆರೆ ಅಭಿವೃದ್ಧಿಗೆ ಆದ್ಯತೆ

ತರೀಕೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಸಂಕಲ್ಪದಂತೆ ತರೀಕೆರೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ...

ಅ. 15ರಂದು ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡದ ಆಯ್ಕೆ

ಚಿಕ್ಕಮಗಳೂರು: 5ನೇ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ–2026 ಹಾಗೂ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ 2026–27ರಲ್ಲಿ...

ಕನ್ನಡ ನಾಡು-ನುಡಿ-ಕನ್ನಡಿಗರ ಬದುಕು-ಭವಿಷ್ಯದ ಕುರಿತು ಅ.14ರಂದು ವಿಚಾರ ಸಂಕಿರಣ

ಚಿಕ್ಕಮಗಳೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಬದುಕು ಮತ್ತು ಭವಿಷ್ಯದ ಕುರಿತು ಸಮಗ್ರ...