ಮೂಡಿಗೆರೆ: ಪ.ಪಂ. ಅಧಿಕಾರಿಗಳು ಪಟ್ಟಣದ ಘನತ್ಯಾಜ್ಯ ಸಂಗ್ರಹ, ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲಾಗಿದ್ದಾರೆಂದು ಪಟ್ಟಣದ ನಿವಾಸಿಗಳು ಹಾಗೂ ರೈತ ಮುಖಂಡರು ಸೋಮವಾರ ಪ.ಪಂ. ಎದುರು ಕಸ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮಾತನಾಡಿ, ಪಟ್ಟಣದಲ್ಲಿ ಜನರು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಅಲ್ಲದೇ ಕಸ ಸಂಗ್ರಹ ವಾಹನಗಳು ಬರುತ್ತಿಲ್ಲ. ಅನೇಕ ವರ್ಷದಿಂದ ಈ ಸಮಸ್ಯೆಗೆ ಇಂದಿಗೂ ಪರಿಹಾರ ಕಂಡುಕೊಳ್ಳಲು ಪ.ಪಂ. ಆಡಳಿತಕ್ಕೆ ಸಾಧ್ಯವಾಗಿಲ್ಲ. ರಸ್ತೆ ಬದಿಯಲ್ಲಿ ಜನರು ಕಸ ಹಾಕತ್ತಿದ್ದರಿಂದ ಮಳೆ ಬಂದಾಗ ತ್ಯಾಜ್ಯವೆಲ್ಲಾ ಕೊಚ್ಚಿಕೊಂಡು ಕುಡಿಯುವ ನೀರು ಬಳಸುವ ಹಳ್ಳ ಕೊಳ್ಳಗಳಿಗೆ ಸೇರುತ್ತಿದೆ. ಕಸದ ರಾಶಿಯಿಂದ ಪಟ್ಟಣದ ಸೌಂಧರ್ಯ ಸಂಪೂರ್ಣ ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿ, ಪ.ಪಂ. ನಿರ್ಲಕ್ಷ್ಯದಿಂದ ಪಟ್ಟಣವೇ ಗೊಬ್ಬು ವಾಸನೆಯಿಂದ ಕೂಡಿದೆ. ಈ ಬಗ್ಗೆ ಅನೇಕ ಬಾರಿ ಪ.ಪಂ. ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದ ವ್ಯಕ್ತಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಸ್ತೆ ಬದಿ ಕಸ ಹಾಕುವವರಿಗೆ ದೊಡ್ಡ ಮೊತ್ತದ ದಂಡ ಹಾಕಬೇಕು. ಕಸ ಸಂಗ್ರಹಣೆ ವಾಹನ ಪ್ರತಿನಿತ್ಯ ಎಲ್ಲಾ ವಾರ್ಡ್‌ಗಳಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಕಸವನ್ನು ಕಚೇರಿಯೊಳಗೆ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭ್‌ರಾಜ್, ಜಿಲ್ಲಾ ಸಂಚಾಲಕ ಪಿ.ಕೆ.ನಾಗೇಶ್‌ಗೌಡ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ತಾಲೂಕು ಸಂಚಾಲಕ ಡಿ.ಎಸ್.ರಮೇಶ್, ಕೃಷ್ಣ ಕಳಸ, ಪದ್ಮರಾಜ್, ಬಸವರಾಜಪ್ಪ ಮತ್ತಿತರರಿದ್ದರು.
Protest by throwing garbage in front of Mudigere P.P.
Leave a comment