ಚಿಕ್ಕಮಗಳೂರು: ಬಸವಣ್ಣನವರ ಕುರಿತು ಆಧಾರರಹಿತ ಹಾಗೂ ಆಕ್ಷೇಪಾರ್ಹ ಆರೋಪಗಳನ್ನು ಮಾಡಿದ್ದಾರೆ ಎನ್ನಲಾದ ಲೇಖಕ ರವಿ ಹಂಜ್, ವಿಶ್ವೇಶ್ವರ ಭಟ್, ಶಂಕರ್ ಬಿದರಿ ಮತ್ತು ಮನು ಬೆಳಗಾರ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.
ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪ್ರೆಸ್ ಕ್ಲಬ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಗಂಗಧರಪ್ಪ, ಮಾಧ್ಯಮದಲ್ಲಿ ಪ್ರಕಟವಾದ ರವಿ ಹಂಜ್ ಅವರ ಸಂದರ್ಶನದಲ್ಲಿ ಬಸವಣ್ಣನವರ ಕುರಿತು ಮಾಡಿರುವ ಹೇಳಿಕೆಗಳು ಬಸವತತ್ವದ ಅಭಿಮಾನಿಗಳ ಭಾವನೆಗಳಿಗೆ ತೀವ್ರ ನೋವುಂಟುಮಾಡಿವೆ ಎಂದು ಆಕ್ಷೇಪಿಸಿದರು.
ಬಸವಣ್ಣನವರು ಜಾತಿ ವ್ಯವಸ್ಥೆಯ ಕಂದಾಚಾರಗಳನ್ನು ಪ್ರಶ್ನಿಸಿ, ಕಾಯಕಕ್ಕೆ ಘನತೆ ನೀಡಿ, ದಾಸೋಹದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು. ಇಂತಹ ಮಹಾನ್ ದಾರ್ಶನಿಕರ ಕುರಿತು ಬಿಜ್ಜಳನ ಕೊಲೆಗೆ ಅವರೇ ಕಾರಣಕರ್ತರು, ಬಿಜ್ಜಳನ ಭಂಡಾರವನ್ನು ದುರುಪಯೋಗಪಡಿಸಿಕೊಂಡು ಶರಣರಿಗೆ ದಾಸೋಹ ಮಾಡಿದರು ಹಾಗೂ ಬಸವಣ್ಣನವರು ಸುಳ್ಳುಗಾರರು ಎಂಬರ್ಥದ ಆರೋಪಗಳನ್ನು ಮಾಡಿರುವುದು ಖಂಡನೀಯ ಎಂದು ಹೇಳಿದರು.
ಈ ಪ್ರಕರಣದಲ್ಲಿ ವಿಶ್ವವಾಣಿ ಮಾಧ್ಯಮ ಸಂಸ್ಥೆಯ ಸಂಪಾದಕೀಯ ಹೊಣೆಗಾರಿಕೆಯೂ ಮುಖ್ಯವಾಗಿದೆ. ಬಸವಣ್ಣನವರಂತಹ ಐತಿಹಾಸಿಕ ಮಹಾಪುರುಷರ ಕುರಿತು ಗಂಭೀರ ಆರೋಪಗಳನ್ನು ಪ್ರಸಾರ ಮಾಡುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಜವಾಬ್ದಾರಿ ಮಾಧ್ಯಮ ಸಂಸ್ಥೆಗೆ ಇದೆ. ಕಾರ್ಯಕ್ರಮದ ಆಯ್ಕೆ, ಅತಿಥಿಗಳ ಆಯ್ಕೆ ಮತ್ತು ಪ್ರಸಾರದ ನಿರ್ವಹಣೆಯಲ್ಲಿ ಸಂಪಾದಕೀಯ ಜವಾಬ್ದಾರಿ ಹೊಂದಿರುವವರ ಪಾತ್ರದ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಾಧ್ಯಮ ಸ್ವಾತಂತ್ರ್ಯವೆಂದರೆ ಇತಿಹಾಸದ ವ್ಯಕ್ತಿತ್ವಗಳನ್ನು ಆಧಾರರಹಿತವಾಗಿ ಅವಮಾನಿಸುವ ಪರವಾನಗಿ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿ ಮತ್ತು ನೈತಿಕತೆಯೂ ಇರಬೇಕು. ಆರೋಪಗಳಿಗೆ ಐತಿಹಾಸಿಕ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸೂಚಿಸಬೇಕು. ಆರೋಪಗಳು ಆಧಾರರಹಿತವೆಂದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ತಪ್ಪು ಮಾಹಿತಿ ಪ್ರಸಾರವಾಗಿದ್ದರೆ ಅದನ್ನು ಸರಿಪಡಿಸಿ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಬಸವತತ್ವದ ವಿದ್ವಾಂಸರು, ಇತಿಹಾಸಕಾರರು ಹಾಗೂ ಶರಣ ಸಾಹಿತ್ಯದ ಸಂಶೋಧಕರಿಗೂ ಅದೇ ಮಾಧ್ಯಮದಲ್ಲಿ ಸಮಾನ ಅವಕಾಶ ಕಲ್ಪಿಸಿ ಆಧಾರಸಹಿತ ಉತ್ತರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ, ಶಿವಾನಂದ, ಬಸವರಾಜು, ಗಾಯಿತ್ರಿ, ಸೌಮ್ಯ, ಯೋಗಿಶ್ ಹಾಗೂ ಬಿಎಸ್ಪಿ ಮುಖಂಡ ಕೆ.ಟಿ. ರಾಧಾಕೃಷ್ಣ ಉಪಸ್ಥಿತರಿದ್ದರು.
Global Lingayat Mahasabha demands the arrest of several individuals including Vishweshwar Bhat.
Leave a comment