Home namma chikmagalur chikamagalur ಕಾಡಾನೆ ದಾಳಿ ಖಂಡಿಸಿ ನರಸಿಂಹರಾಜಪುರ ಬಂದ್‌ ಯಶಸ್ವಿ
chikamagalurHomeLatest Newsnamma chikmagalur

ಕಾಡಾನೆ ದಾಳಿ ಖಂಡಿಸಿ ನರಸಿಂಹರಾಜಪುರ ಬಂದ್‌ ಯಶಸ್ವಿ

Share
Share

ನರಸಿಂಹರಾಜಪುರ: ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಂಗಿ ಗ್ರಾಮದ ರೈತ ಕೃಷ್ಣಮೂರ್ತಿ ಅವರು ಬುಧವಾರ ಕಾಡಾನೆ ದಾಳಿಗೆ ಬಲಿಯಾಗಿರುವುದನ್ನು ಖಂಡಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ 8ನೇ ಮೈಲಿಕಲ್ಲು ಗ್ರಾಮದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಶಾಸಕರು, ಜಿಲ್ಲಾಧಿಕಾರಿ, ಸಂಸದರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಭದ್ರಾ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ ಮಾತನಾಡಿ, ‘ಬೇಲೂರಿನ 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶಾಸಕರೂ ಅರಣ್ಯ ಸಚಿವರ ಗಮನಕ್ಕೆ ತಂದಿದ್ದಾರೆ. ಈ ಕುರಿತು ಚರ್ಚಿಸಲು ನ. 25ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಅಲ್ಲಿಯವರೆಗೆ ಆನೆಗಳನ್ನು ಸ್ಥಳಾಂತರಿಸುವುದಿಲ್ಲ’ ಎಂದು ತಿಳಿಸಿದರು.

ರೈತನ ಸಾವಿಗೆ ಕಾರಣವಾದ ಕಾಡಾನೆಯನ್ನು ಸೆರೆಹಿಡಿಯಲು ಶುಕ್ರವಾರ (ನ. 20) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುವುದು. ಆನೆಗಳು ಗ್ರಾಮ ಪ್ರವೇಶಿಸದಂತೆ ಆನೆ ಕಾರ್ಯಪಡೆಯ ಗಸ್ತು ಹೆಚ್ಚಿಸಲಾಗುವುದು ಎಂದರು.

ಈ ಭರವಸೆಗಳನ್ನು ಲಿಖಿತವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದಕ್ಕೆ ಡಿಎಫ್‌ಒ ಒಪ್ಪಿಗೆ ಸೂಚಿಸಿದರು. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೇಮನೆ ಮಾತನಾಡಿ, ನ. 25ರವರೆಗೆ ಯಾವುದೇ ಕಾಡಾನೆಯನ್ನು ಸೆರೆಹಿಡಿದು ಭದ್ರಾ ಅಭಯಾರಣ್ಯದೊಳಗೆ ಬಿಡುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕು.

ಹೆನ್ನಂಗಿ ಮತ್ತು ಬೆಳ್ಳಂಗಿ ರಸ್ತೆಗಳ ಸ್ವಚ್ಛತಾ ಕಾರ್ಯ ಆರಂಭಿಸುವ ಬಗ್ಗೆ ಮುಚ್ಚಳಿಕೆ ನೀಡಬೇಕು. ಆರ್‌ಡಿಪಿಆರ್ ಅಡಿಯಲ್ಲಿ ಮಂಜೂರಾಗಿದ್ದ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆಯ ಆಕ್ಷೇಪಣೆ ತೆರವುಗೊಳಿಸಿ, ಟೆಂಡರ್ ಕರೆದು 3.5 ಕಿ.ಮೀ. ರಸ್ತೆಗೆ ಅಗತ್ಯ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಬಫರ್‌ ವಲಯದ ಸಮಸ್ಯೆ ಕುರಿತು ನ. 25ರಂದು ಬೆಂಗಳೂರಿನಲ್ಲಿ ಸಂಸದರು, ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಅನುದಾನ ಮಂಜೂರು ಮಾಡುವ ಅಥವಾ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಕಾಡಾನೆ ದಾಳಿಯಲ್ಲಿ ಮೃತಪಟ್ಟವರಿಗೆ ನೀಡುವ ಪರಿಹಾರವನ್ನು ₹20 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಬೇಕು. ಮೃತ ರೈತನ ಪುತ್ರನಿಗೆ ಕಾಯಂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಚಿಟ್ಟಿಗದ್ದೆ ರಾಮಸ್ವಾಮಿ, ಪಿ.ಜೆ. ಆ್ಯಂಟನಿ, ಪುರುಷೋತ್ತಮ ಕೂಸಗಲ್, ಇತರ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ದಲಿತ ಸಂಘಟನೆಗಳ ಮುಖಂಡರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ, ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಾಸಕರು, ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

Narasimharajapura Bandh protesting wild elephant attack proves successful

Share

Leave a comment

Leave a Reply

Your email address will not be published. Required fields are marked *

Don't Miss

ಕೊಪ್ಪ ತಾಲ್ಲೂಕಿನಲ್ಲಿ ಕಾಡುಕೋಣಗಳ ಉಪಟಳ

ಕೊಪ್ಪ: ಕಾಡುಕೋಣಗಳ ಉಪಟಳ ದಿನೇ ದಿನೇ ಮಿತಿ ಮೀರುತ್ತಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಏಕಾಏಕಿ ಕಾಡುಕೋಣ ದಾಳಿಗೆ ಯತ್ನಿಸಿದ ಆತಂಕಕಾರಿ ಘಟನೆ ಕೊಪ್ಪ ಅರಣ್ಯ ವಲಯ ವ್ಯಾಪ್ತಿಯ...

ಕೆಂಪುಬಸ್ ಬಲೂ ಗ್ಯಾರಂಟಿ ಡೇಂಜರ್ ? ಡೇಂಜರ್ ? ಕೆಟ್ಟು ನಿಲ್ಲುವ ಬಸ್ಸುಗಳು

ಚಿಕ್ಕಮಗಳೂರು:  ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಲೂ ಡೇಂಜರ್ ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತವೆ ಎಂದು ಪ್ರಯಾಣಿಕರು ದೂರುವುದು ಸಾಮಾನ್ಯವಾಗಿದ್ದು ಜೊತೆಗೆ ತಳ್ಳು ಮಾಡಲ್ ಐಸಾ ಎಂದು ಬಸ್ಸುಗಳನ್ನು ತಳ್ಳುವ ದೃಶ್ಯ ಸಾಮಾನ್ಯವಾಗಿ...

Related Articles

20 ವರ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ರವಿ ಕೊಡುಗೆ ಏನು?

ಚಿಕ್ಕಮಗಳೂರು: ಸುಮಾರು 20 ವರ್ಷಗಳ ಕಾಲ ಶಾಸಕರಾಗಿ ಅಧಿಕಾರ ಅನುಭವಿಸಿರುವ ಸಿ.ಟಿ. ರವಿ ಅವರು ಜಿಲ್ಲೆಗೆ...

ಮನೆಗೆ ನುಗ್ಗಿ ₹3.44 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಹಾಗೂ ನಗದು ಕಳವು

ಚಿಕ್ಕಮಗಳೂರು, ನ.20: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ₹3.44 ಲಕ್ಷ...

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು

ಚಿಕ್ಕಮಗಳೂರು: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಪಕ್ಷದ ಸಂಘಟನೆಗೆ...

ಕೋಮುವಾದಿ ರಾಜಕಾರಣವನ್ನೂ ಸೋಲಿಸಬೇಕು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಜನತೆ ಚುನಾವಣೆಯಲ್ಲಿ ಕೋಮುವಾದಿ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಕೇವಲ...