ಚಿಕ್ಕಮಗಳೂರು: ಸುಮಾರು 20 ವರ್ಷಗಳ ಕಾಲ ಶಾಸಕರಾಗಿ ಅಧಿಕಾರ ಅನುಭವಿಸಿರುವ ಸಿ.ಟಿ. ರವಿ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಜನರು ಪ್ರಶ್ನಿಸಬೇಕಿದೆ. ಅವರ ರಾಜಕೀಯ ಮಾತುಗಳಲ್ಲಿ ಸಮಾಜವನ್ನು ಒಗ್ಗೂಡಿಸುವುದಕ್ಕಿಂತ ಒಡಕು ಮೂಡಿಸುವ ವಿಚಾರಗಳೇ ಹೆಚ್ಚಾಗಿ ಕೇಳಿಬಂದಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಹರ್ಷದ್ ಟೀಕಿಸಿದರು.
ನಗರದಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 20 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಅವರು ಮಾಡಿರುವ ಕೆಲಸಗಳ ಬಗ್ಗೆ ಚರ್ಚೆಯಾಗಬೇಕು. ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಮುಂದುವರಿದಿರುವುದಕ್ಕೆ ಅಭಿವೃದ್ಧಿಯ ಕೊರತೆಯೂ ಒಂದು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳಿಗೆ 20 ವರ್ಷಗಳ ಅಧಿಕಾರ ದೊಡ್ಡ ಅವಧಿ. ಇಷ್ಟು ವರ್ಷ ಅಧಿಕಾರ ಅನುಭವಿಸಿದವರು ಜನರಿಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಪರಿಶೀಲಿಸಬೇಕು. ಸಮಾಜದಲ್ಲಿ ವಿಷಬೀಜ ಬಿತ್ತುವ ಬದಲು ಸಮಾಜವನ್ನು ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಶಾಸಕ ಎಚ್.ಡಿ. ತಮ್ಮಯ್ಯ ಅವರು ಮಾತು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಯಾಗಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡದೆ, ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಕಾಣುತ್ತಾ ಒಗ್ಗಟ್ಟಿನಿಂದ ಮುನ್ನಡೆಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದವರು ಒಂದೇ ತಾಯಿಯ ಮಕ್ಕಳು, ಒಂದೇ ದೇವರ ಮಕ್ಕಳು ಎಂಬ ಭಾವನೆಯಿಂದ ಸಮಾಜವನ್ನು ಮುನ್ನಡೆಸುವ ಮನೋಭಾವ ಅವರಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಧ್ವನಿಯಿಲ್ಲದವರು, ಶಕ್ತಿ ಇಲ್ಲದವರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ದುರ್ಬಲ ವರ್ಗಗಳ ಹಿತ ಕಾಯುವ ಬದ್ಧತೆಯಿಂದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
What is Ravi’s contribution to the district’s development despite having been in power for 20 years?
Leave a comment