ಚಿಕ್ಕಮಗಳೂರು, ನ.20: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ₹3.44 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಕಾಲುಚೈನ್ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಲ್ಯಾಣ ನಗರ ನಿವಾಸಿ ಸುಧಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸುಧಾ ಅವರು ವಿಕಾಸನಗರದಲ್ಲಿರುವ ಮೂರಾರ್ಜಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಕೆಲ ದಿನಗಳಲ್ಲಿ ಕೆಲಸದ ಸ್ಥಳದಲ್ಲೇ ಉಳಿದುಕೊಳ್ಳುತ್ತಿದ್ದರು. ಮನೆಯಲ್ಲಿ ಅವರ ಪುತ್ರ ಆಯುಷ್ಯ್ ವಾಸವಾಗಿದ್ದ.
ನ.17ರಂದು ರಾತ್ರಿ ಸುಮಾರು 9.30ಕ್ಕೆ ಸುಧಾ ಅವರು ಮಗನಿಗೆ ಅಡುಗೆ ಮಾಡಿ ಕೆಲಸಕ್ಕೆ ತೆರಳಿದ್ದರು. ಅದೇ ದಿನ ಆಯುಷ್ಯ್ ಕೂಡ ಕೆಲಸಕ್ಕೆ ತೆರಳುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಮನೆಯ ಚಪ್ಪಲಿ ಸ್ಟ್ಯಾಂಡ್ನಲ್ಲಿದ್ದ ಶೂವೊಂದರೊಳಗೆ ಇಟ್ಟು ತೆರಳಿದ್ದಾನೆ. ಬಳಿಕ ಸ್ನೇಹಿತನ ಮನೆಗೆ ತೆರಳಿದ್ದರಿಂದ ರಾತ್ರಿ ಮನೆಗೆ ಬಂದಿರಲಿಲ್ಲ. ಸುಧಾ ಕೂಡ ಮನೆಗೆ ವಾಪಸ್ ಆಗಿರಲಿಲ್ಲ.
ನ.18ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಮನೆಗೆ ಬಂದ ಸುಧಾ ಅವರು ಶೂವಿನಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಹೋದಾಗ ಮೊದಲ ಕೊಠಡಿಯಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲು ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ ಮಗನಿಗೆ ಸೇರಿದ 2 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಗೊತ್ತಾಗಿದೆ.
ನಂತರ ಎರಡನೇ ಕೊಠಡಿಯಲ್ಲಿದ್ದ ಮತ್ತೊಂದು ಬೀರುವನ್ನೂ ಪರಿಶೀಲಿಸಿದಾಗ ಅದರ ಬಾಗಿಲು ತೆರೆದಿದ್ದು, ಬಟ್ಟೆಗಳು ಅಸ್ತವ್ಯಸ್ತವಾಗಿದ್ದವು. ಬೀರುವಿನಲ್ಲಿದ್ದ ಕೆಂಪು ಹರಳಿನ ಜುಮಕಿ, ಬಿಳಿ ಹರಳಿನ ಜುಮಕಿ, ಚಿನ್ನದ ಬ್ರಾಸ್ಲೈಟ್, ಎರಡು ಚಿನ್ನದ ಉಂಗುರ, ಚಿಕ್ಕ ವಾಲೆ, ಸೈಡ್ ಮಾಟಿ ಸೇರಿದಂತೆ ಒಟ್ಟು 33.250 ಗ್ರಾಂ ಚಿನ್ನಾಭರಣ, 130 ಗ್ರಾಂ ಬೆಳ್ಳಿ ಕಾಲುಚೈನ್ ಹಾಗೂ ₹50 ಸಾವಿರ ನಗದು ಕಳವಾಗಿರುವುದು ಪತ್ತೆಯಾಗಿದೆ.
ಕಳವಾಗಿರುವ ಚಿನ್ನಾಭರಣಗಳ ಅಂದಾಜು ಮೌಲ್ಯ ₹2.83 ಲಕ್ಷ, ಬೆಳ್ಳಿ ಕಾಲುಚೈನ್ನ ಮೌಲ್ಯ ₹11 ಸಾವಿರ ಹಾಗೂ ನಗದು ₹50 ಸಾವಿರ ಸೇರಿದಂತೆ ಒಟ್ಟು ₹3.44 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿಕೊಂಡು ಕಳ್ಳರು ಶೂವಿನಲ್ಲಿ ಇಡಲಾಗಿದ್ದ ಕೀಲಿಯನ್ನು ಬಳಸಿರಬಹುದು ಅಥವಾ ನಕಲಿ ಕೀಲಿಯಿಂದ ಮನೆಗೆ ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಸುಧಾ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಾಥಮಿಕ ವರದಿ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Gold silver and cash worth ₹344 lakh stolen after breaking into a house
Leave a comment