ಚಿಕ್ಕಮಗಳೂರು: ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಉತ್ತಮ ಬೆಳೆ ಬೆಳೆಯಬೇಕು, ಕಡಿಮೆ ಬಂಡವಾಳ ಹೂಡಿ ಹೆಚ್ಚು ಆದಾಯ ತರುವ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಸದೃಢರಾಗಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.
ಅವರು ಇಂದು ತಮ್ಮ ನಿವಾಸದಲ್ಲಿ ಸಣ್ಣ ನೀರಾವರಿ ಮತ್ತು ಅತರ್ಜಲ ಅಭಿವೃದ್ಧಿ ಇಲಾಖೆ ಹಾಸನ ವಿಭಾಗ ಚಿಕ್ಕಮಗಳೂರು ಉಪವಿಭಾಗದ ವ್ಯಾಪ್ತಿಗೆ ಬರುವ ಎಸ್‌ಟಿಪಿ, ಟಿಎಸ್‌ಪಿ ಗಂಗಾಕಲ್ಯಾಣ ಮಾದರಿಯ ಯೋಜನೆ ಅಡಿಯಲ್ಲಿ ಸೌಲಭ್ಯ ಕಲ್ಪಿಸುವ ಪತ್ರ ವಿತರಿಸಿ ಮಾತನಾಡಿದರು.
ಸರ್ಕಾರ ಬಡವರಿಗೆ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಇದರ ಜೊತೆಗೆ ಉಚಿತ ಬೋರ್‌ವೆಲ್ ಹಾಗೂ ಅಭಿವೃದ್ಧಿಗೂ ಅನುದಾನ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಜನಪರ ಕಾರ್ಯಗಳಿಗೆ ಆದ್ಯತೆ ನೀಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಾತ್ಯಾತೀತವಾಗಿ ಬಡವರ ಪರ ಚಿಂತನೆ ಮಾಡುವ ಕಾಂಗ್ರೆಸ್ ಸರ್ಕಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ೩೪ ಗ್ರಾ.ಪಂ ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದೆ ಎಂದು ಶ್ಲಾಘಿಸಿದರು.
ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ರಾಜ್ಯಸರ್ಕಾರ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ ಯೋಜನೆಗಳಿಗೆ ೫೭ ಸಾವಿರ ಕೋಟಿ ರೂ ವ್ಯಯ ಮಾಡುವ ಮೂಲಕ ಬಡವರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಸ್‌ಸಿ, ಎಸ್‌ಟಿ ಸಮುದಾಯಗಳು ಸೇರಿದಂತೆ ಬಡವರ ಅನುಕೂಲಕ್ಕಾಗಿ ಸಣ್ಣ ನೀರಾವರಿ ಸಚಿವ ಬೋಸರಾಜು ಅವರು ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ಕ್ಷೇತ್ರದಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ೩೩ ಉಚಿತ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ ಎಂದು ಹೇಳಿದರು.
ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಹಾಗೂ ಅಭಿವೃದ್ಧಿಗೆ ಅನುದಾನ ನೀಡಲಾಗಿದ್ದು, ಬಡವರ, ಅಲ್ಪಸಂಖ್ಯಾತರ, ದೀನ-ದಲಿತರ ಪರವಾಗಿ ಸರ್ಕಾರ ಕೆಲಸಮಾಡುತ್ತಿದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಕ್ಷಿಣಮೂರ್ತಿ ಮಾತನಾಡಿ, ಎಸ್‌ಸಿಪಿ, ಟಿಎಸ್‌ಪಿ ಗಂಗಾ ಕಲ್ಯಾಣ ಮಾದರಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಎಸ್‌ಸಿಪಿಯಲ್ಲಿ ೧೩, ಟಿಎಸ್‌ಪಿಯಲ್ಲಿ ೭ ಬೋರ್‌ವೆಲ್‌ಗಳು ಅನುಮೋದನೆಗೊಂಡಿದ್ದು, ಕಳೆದ ಮಾರ್ಚ್‌ನಲ್ಲಿ ಫಲಾನುಭವಿ ರೈತರಿಗೆ ಸೌಲಭ್ಯ ಕಲ್ಪಿಸಲಾಗಿದೆ. ೨೦೨೫-೨೬ ರಲ್ಲಿ ಒಟ್ಟು ೩೦ ಫಲಾನುಭವಿಗಳಿಗೆ ತಲಾ ೫ ಲಕ್ಷ ರೂ. ವೆಚ್ಚದಲ್ಲಿ ಸೌಲಭ್ಯ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ವಿಕಾಸ್ ಮತ್ತಿತರರು ಉಪಸ್ಥಿತರಿದ್ದರು.
Farmers should grow better crops with less water
Leave a comment