ಚಿಕ್ಕಮಗಳೂರು: ಸಖರಾಯಪಟ್ಟಣ ಮತ್ತು ದೇವನೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ೨೦ ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದ್ದು, ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಶೀಘ್ರವೇ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ಸಖರಾಯಪಟ್ಟಣ ಹೋಬಳಿಯ ಶಿವಪುರ, ಚಟ್ನಪಾಳ್ಯ, ಕಬ್ಬಳಿ, ನಾಗರಾಳು, ಗುಬ್ಬಿಹಳ್ಳಿ ತಾಂಡ್ಯಕ್ಕೆ ಸುಮಾರು ೪ ಕೋಟಿ ರೂ ವೆಚ್ಚದಲ್ಲಿ ಮೂರು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ೨೦೨೪-೨೫ ರಲ್ಲಿ ೨೪ ಕೋಟಿ ರೂಗಳನ್ನು ಸರ್ಕಾರ ಅನುದಾನ ನೀಡಿದ್ದು, ಪುನಹಾ ವಿಶೇಷ ಅನುದಾನವನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾರೆ. ಈ ಅನುದಾನದಲ್ಲಿ ೭ ಕೋಟಿ ರೂಗಳನ್ನು ಗ್ರಾಮೀಣ ಭಾಗದ ರಸ್ತೆಗಳು, ಸಮುದಾಯ ಭವನ, ದೇವಾಲಯಗಳಿಗೆ ಮೀಸಲಿಟ್ಟು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಈಗ ನೀಡಿರುವ ೫೦ ಕೋಟಿ ರೂ ವಿಶೇಷ ಅನುದಾನದಲ್ಲಿ ದೇವಾಲಯ ಮತ್ತು ಸಮುದಾಯಭವನಗಳಿಗೆ ೧೦ ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಉಳಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ೪೦ ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು. ರಾಜ್ಯಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜೊತೆಗೆ ಎತ್ತಿನಹೊಳೆ ನೀರಾವರಿಯಿಂದಾಗಿ ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ, ದೇವನೂರು ಕೆರೆಗಳಿಗೆ ನೀರು ಹರಿದುಬಂದು ಬಯಲು ಭಾಗದ ಬಹುತೇಕ ಕೆರೆಗಳು ಭರ್ತಿಯಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಅಸ್ಥಿತ್ವಕ್ಕೆ ಬಂದ ಆರು ತಿಂಗಳಲ್ಲಿ ಅನುಷ್ಠಾನಗೊಳಿಸಿ ವಾರ್ಷಿಕ ೫೭ ಸಾವಿರ ಕೋಟಿ ರೂ ಮೀಸಲಿಟ್ಟು, ಖರ್ಚುಮಾಡುತ್ತಿರುವ ಜೊತೆಗೆ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಮಂಜೂರು ಮಾಡಿದ್ದಾರೆಂದು ಹೇಳಿದರು.
ಭದ್ರಾ ಉಪಕಣಿವೆ ಮೂರನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳು, ನೀರಾವರಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿ ಗುದ್ದಲಿ ಪೂಜೆ ನೆರವೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಯೋಜನೆ ಅನುಷ್ಠಾನವಾದರೆ ಕ್ಷೇತ್ರದ ೫೭ ಕೆರೆಗಳಿಗೆ ನೀರು ಹರಿದುಬರುತ್ತದೆ. ಇನ್ನೆರಡು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಲೋಕಾರ್ಪಣೆ ಮಾಡುತ್ತೇವೆ ಎಂದರು.
ಕ್ಷೇತ್ರದ ೩೪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ದೇವಾಲಯ ಅಭಿವೃದ್ಧಿಗೆ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕನಿಷ್ಠ ೨ ರಿಂದ ೩ ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಗುಬ್ಬಿಹಳ್ಳಿಯಿಂದ ಶಿವಪುರ, ಗುಬ್ಬಿಹಳ್ಳಿ ತಾಂಡ್ಯಕ್ಕೆ ರಸ್ತೆ ಡಾಂಬರೀಕರಣ, ಚಟ್ನಪಾಳ್ಯ ಗೇಟ್‌ನಿಂದ ಬ್ರಹ್ಮಸಮುದ್ರ ರಸ್ತೆ, ಕಬ್ಬಳಿಯಿಂದ ಗುಣಸಾಗರವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ಹಾಗೂ ನಾಗರಾಳಿನಲ್ಲಿ ಗ್ರಂಥಾಲಯ ಉದ್ಘಾಟನೆ ನೆರವೇರಿಸಿದ್ದಾರೆ ಎಂದರು.
ಕ್ಷೇತ್ರದಾದ್ಯಂತ ಸುಮಾರು ೫೦ ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ, ನಗರದಲ್ಲಿ ೨೫ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಶಾಸಕರು ಮುಂದಾಗಿದ್ದಾರೆಂದು ಶ್ಲಾಘಿಸಿದರು. ವಿರೋಧ ಪಕ್ಷಗಳ ಟೀಕೆಗೆ ಜನಸಾಮಾನ್ಯರೊಂದಿಗೆ ಇದ್ದು, ಎಲ್ಲರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅಭಿವೃದ್ಧಿ ಮೂಲಕ ತಕ್ಕ ಉತ್ತರ ನೀಡುತ್ತಿದ್ದಾರೆ. ಭದ್ರಾ ಉಪಕಣಿವೆ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಣೂರು ಗ್ರಾ.ಪಂ ಅಧ್ಯಕ್ಷೆ ಸುನಂದಮ್ಮ ವಹಿಸಿದ್ದರು. ಸದಸ್ಯರಾದ ಉಮಾಕಾಂತ್, ಅಜ್ಜಯ್ಯ, ಮೂರ್ತಿ, ಮಂಜುಳ, ನವೀನ್, ನಟೇಶ್, ಧನಂಜಯ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಸಂತೋಷ್, ಉಪಾಧ್ಯಕ್ಷೆ ಚಂದ್ರಿಬಾಯಿ, ಗ್ರಾ.ಪಂ ಸದಸ್ಯರುಗಳಾದ ಬಸಣ್ಣ, ಚೆನ್ನಬಸವಣ್ಣ, ಯಶೋಧ, ಗ್ರಾಮದ ಮುಖಂಡರುಗಳಾದ ಕೊಲ್ಲಾಬೋವಿ, ಯತೀಶ್, ಕುಮಾರ್, ನಂದೀಶ್, ದರ್ಶನ್, ಮೋಹನ್‌ನಾಯ್ಕ್, ಇಂತಿಯಾಜ್, ಶಿವಣ್ಣ, ರಮೇಶ್, ಮಹಾಲಿಂಗಪ್ಪ, ವಿಶ್ವನಾಥ್, ರವಿ, ಲೋಹಿತ್, ಚೇತನ್ ಮತ್ತಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.
Development at a cost of Rs. 20 crore for Sakharayapattana-Devanoor GP constituencies
Leave a comment