ಆಲ್ದೂರು: ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ’ ಎಂಬ ನಾರಾಯಣ ಗುರುಗಳ ಹೇಳಿಕೆಯನ್ನು ಮೂಲಮಂತ್ರ ವಾಗಿಸಿಕೊಂಡು ಸಮುದಾಯದ ಅಭಿವೃದ್ಧಿ ಸಾಧಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು
ಅವರು ಪಟ್ಟಣದ ಬಿಲ್ಲವ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ವತಿಯಿಂದ ಚಿಂತನ– ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ಹೊತ್ತು ಉಪವಾಸವಿದ್ದರೂ ಪರವಾಗಿಲ್ಲ, ತಾಯಂದಿರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಂಕಲ್ಪ ತೊಡಬೇಕು’ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಲಕ್ಷ್ಮಿ ನರಸಯ್ಯ ಮಾತನಾಡಿ, ‘ಸಮುದಾಯ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಬಿಲ್ಲವ ಸಮುದಾಯದ ಆರ್ಯ ಈಡಿಗರು, ಈಳವರು, ನಾಮಧಾರಿಗಳು, ದೀವರು ಸೇರಿ 26 ಉಪ ಪಂಗಡಗಳ ಅಭಿವೃದ್ಧಿಗೆ ಅವಲೋಕನ ಮಾಡಬೇಕಿದೆ. ಕೇರಳದಲ್ಲಿ ಎಸ್‌ಎನ್‌ಡಿಪಿ ಸಂಘಟನೆ ಮೂಲಕ ಸಮುದಾಯದ ಅನುಯಾಯಿಗಳು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಿರುವಂತೆ ಇಲ್ಲೂ ಒಮ್ಮನಸ್ಸಿನಿಂದ ಅಭಿವೃದ್ಧಿ ಸಾಧಿಸಬೇಕು’ ಎಂದರು.
ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ‘ನಾನು ಸಮಾಜಕ್ಕೇನು ಕೊಡುಗೆ ನೀಡಿದ್ದೇನೆ ಎಂಬುದನ್ನು ಸಮುದಾಯದ ಪ್ರತಿಯೊಬ್ಬರೂ ಚಿಂತಿಸಬೇಕು’ ಎಂದರು.
ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಪಿ.ಆರ್. ಸದಾಶಿವ ಮಾತನಾಡಿ, ‘ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ. ಐಎಎಸ್, ಐಪಿಎಸ್, ಅಧಿಕಾರಿಗಳು ಸಮುದಾಯದಿಂದ ಬರಬೇಕು. ರಾಜಕೀಯವಾಗಿಯೂ ಮುನ್ನೆಲೆಗೆ ಬರಬೇಕು’ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಅಧ್ಯಕ್ಷ ಎಚ್.ಎಂ. ಸತೀಶ ಅಧ್ಯಕ್ಷತೆ ವಹಿಸಿದ್ದರು. ‘ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಎಲ್ಲರೂ ಪರಿಶ್ರಮದಿಂದ ದುಡಿಯಬೇಕು’ ಎಂದರು.
ಜಿಲ್ಲೆಯಲ್ಲಿ 33 ಸಂಘಗಳಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರನೆಯ ಚಿಂತನ ಮಂಥನ ಸಭೆ ಇದಾಗಿದೆ. ದಾವಣಗೆರೆ ಮತ್ತು ಧಾರವಾಡದಲ್ಲೂ ಸಭೆ ಆಯೋಜಿಸಲು ಚಿಂತಿಸಲಾಗಿದೆ. ಸಮುದಾಯದ ಶಕ್ತಿ ಪ್ರದರ್ಶನಕ್ಕಾಗಿ ದೊಡ್ಡ ಮಟ್ಟದ ಸಮಾವೇಶ ಆಯೋಜಿಸುವ ಯೋಜನೆಯೂ ಇದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘಗಳ ಅಧ್ಯಕ್ಷ ಎಚ್.ಎಂ ಸತೀಶ ಹೇಳಿದರು.
ಬಿಲ್ಲವ ಸಂಘದ ಆಲ್ದೂರು ಘಟಕದ ಗೌರವ ಅಧ್ಯಕ್ಷ ಬೋಜ ಪೂಜಾರಿ ಬನ್ನೂರು, ಅಧ್ಯಕ್ಷ ಕೆ.ಎಲ್ ಕುಮಾರ್, ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
‘Become independent through education strong through organization’
Leave a comment