ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರು ಅಕ್ಷರಶಃ ಹೈರಾಣಾಗಿದ್ದಾರೆ.
ತಾಲೂಕಿನ ಬೆಟ್ಟದಮಳಲಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದೆ.
ಕಾಡುಕೋಣಗಳು ಏಕಾಏಕಿ ತೋಟಕ್ಕೆ ಲಗ್ಗೆ ಇಟ್ಟಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದ್ದು, ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.
ಕಾಫಿ ಕೊಯ್ಲಿನ ಈ ಪ್ರಮುಖ ಸಮಯದಲ್ಲಿ ಕಾಡುಕೋಣಗಳು ತೋಟದಲ್ಲೇ ಮೊಕ್ಕಾಂ ಹೂಡಿರುವುದರಿಂದ ಬೆಳೆ ಹಾನಿಯಾಗುವ ಭೀತಿಯೂ ಎದುರಾಗಿದೆ.
ಈಗಾಗಲೇ ಜಿಲ್ಲೆಯ ಹಲವೆಡೆ ಕಾಡುಕೋಣಗಳ ದಾಳಿಯಿಂದ ಪ್ರಾಣಹಾನಿ ಸಂಭವಿಸಿರುವ ಬೆನ್ನಲ್ಲೇ, ಬೆಟ್ಟದಮಳಲಿ ಗ್ರಾಮದಲ್ಲಿ ಹಿಂಡು ಹಿಂಡಾಗಿ ಕಾಡುಕೋಣಗಳು ಕಾಣಿಸಿಕೊಂಡಿರುವುದು ಜನರನ್ನು ಆತಂಕದ ಸುಳಿಗೆ ದೂಡಿದೆ.
ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಈ ಕಾಡುಕೋಣಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಜೀವ ಮತ್ತು ಬೆಳೆಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
A herd of wild buffaloes is seen in Bettadamalali village
Leave a comment