ಚಿಕ್ಕಮಗಳೂರು: ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಮಲ್ಲೇನಹಳ್ಳಿ ಹಾಳೂರು ಗ್ರಾಮದ ಲೋಕೇಶ್ ಬಿ.ಎಲ್. (ವಯಸ್ಸು ತಿಳಿದುಬಂದಿಲ್ಲ) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 28ರಂದು ಸಂಜೆ ಸುಮಾರು 6.30ರ ವೇಳೆಯಲ್ಲಿ ಲೋಕೇಶ್ ಅವರು ಮಲ್ಲೇನಹಳ್ಳಿ ಹಾಳೂರು ಗ್ರಾಮದಿಂದ ಗುಳ್ಳದಮನೆಯಲ್ಲಿರುವ ತಮ್ಮ ಅಕ್ಕ ಕೆಂಪಮ್ಮ ಅವರ ಮನೆಗೆ ಕೆಎ-04 ಎಚ್ವೈ-9270 ನೋಂದಣಿ ಸಂಖ್ಯೆಯ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ನಲ್ಲಿ ತೆರಳುತ್ತಿದ್ದರು.
ಈ ವೇಳೆ ದೊಡ್ಡನಿಂಗೇನಹಳ್ಳಿ ಮತ್ತು ಕೆಂಚಾಪುರ ಗ್ರಾಮಗಳ ನಡುವಿನ ಮನು ಎಂಬುವವರ ತೋಟದ ಸಮೀಪ ಅವರು ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಲೋಕೇಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಮೃತರ ಪುತ್ರ ಯೋಗೀಶ್ ಅವರು ಬೆಂಗಳೂರಿನಿಂದ ಆಗಮಿಸಿ, ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ತಂದೆಯ ಮೃತದೇಹವನ್ನು ಗುರುತಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 29ರಂದು ಯೋಗೀಶ್ ಅವರು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಅದರ ಚಾಲಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Rider dies on the spot after an unidentified vehicle hits his bike
Leave a comment