Home namma chikmagalur chikamagalur ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಅ.31ರೊಳಗೆ ಪ್ರಕ್ರಿಯೆ ಪೂರ್ಣ
chikamagalurHomeLatest Newsnamma chikmagalur

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಅ.31ರೊಳಗೆ ಪ್ರಕ್ರಿಯೆ ಪೂರ್ಣ

Share
Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 12 ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಕ್ಟೋಬರ್ 31ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಕೆಪಿಸಿಸಿಗೆ ಶಿಫಾರಸುಗಳ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ವೀಕ್ಷಕ ಅಬ್ದುಲ್ ಗಫರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನಾ ಪುನರ್‌ರಚನೆ ಪ್ರಕ್ರಿಯೆಯ ಭಾಗವಾಗಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 12 ಬ್ಲಾಕ್‌ಗಳಿಗೆ ಪ್ರವಾಸ ಕೈಗೊಂಡು ಪಕ್ಷದ ಶಾಸಕರು, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಪ್ರತಿ ಬ್ಲಾಕ್‌ನಿಂದ ಅರ್ಜಿಗಳು ಹಾಗೂ ಮುಖಂಡರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು ಕನಿಷ್ಠ ಮೂರು ಹಾಗೂ ಗರಿಷ್ಠ ಐದು ಹೆಸರುಗಳನ್ನು ಶಿಫಾರಸು ಮಾಡಲಾಗುವುದು. ಈ ಪಟ್ಟಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಲ್ಲಿಸಿದ ಬಳಿಕ ಪಕ್ಷದ ರಾಜ್ಯ ಮಟ್ಟದ ನಾಯಕತ್ವದ ಮಾರ್ಗದರ್ಶನದಲ್ಲಿ ಅಂತಿಮ ಆಯ್ಕೆ ನಡೆಯಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನೀತಿ-ಸಿದ್ಧಾಂತಗಳನ್ನು ಒಪ್ಪಿಕೊಂಡು ಸಂಘಟನೆಗಾಗಿ ಸಮಯ ಮೀಸಲಿಡುವ ಸಾಮರ್ಥ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಗಾಂಧೀಜಿ ಅವರ ಮಾರ್ಗದಲ್ಲಿ ಪಕ್ಷದ ಸಂಘಟನೆಯನ್ನು ಜನಪರವಾಗಿ ಮುನ್ನಡೆಸುವ ಕಾರ್ಯಕರ್ತರನ್ನು ಗುರುತಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಸಂಘಟನೆಯ ನೇಮಕಾತಿಯಲ್ಲಿ ಮಹಿಳೆಯರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟ ಜಾತಿ-ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶವಿದೆ. ಯುವಕರು ಹಾಗೂ ಹಿರಿಯರನ್ನು ಒಳಗೊಂಡ ಸಮತೋಲನದ ತಂಡವನ್ನು ರಚಿಸಲಾಗುವುದು ಎಂದು ಅಬ್ದುಲ್ ಗಫರ್ ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ವಿಭಾಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯೂ ನಡೆಯಲಿದೆ. ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಪಕ್ಷದ ಸಂಘಟನಾ ಪುನರ್‌ರಚನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಇದರ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯಕ್ಕೆ ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮಲೆನಾಡು ಮತ್ತು ಕರಾವಳಿ ಭಾಗಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿದ್ದು, ಜಿಲ್ಲೆಗೆ ಹೆಚ್ಚಿನ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳು ದೊರೆಯುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯೂ ಜನರೊಂದಿಗೆ ನಿರಂತರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಹಿಂದಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅವರ ತಂಡ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದ ಅಬ್ದುಲ್ ಗಫರ್, ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಹಾಗೂ ಅವರ ತಂಡಕ್ಕೂ ಅಭಿನಂದನೆ ಸಲ್ಲಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ವೀಕ್ಷಕರ ಮೋಹನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ರೂಬಿ, ಶಿವು, ಹೇಮಣ್ಣ, ಪ್ರವೀಣ್ ಬೆಟ್ಟಗೆರೆ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Process for appointing Block Congress presidents to be completed by October 31.

Share

Leave a comment

Leave a Reply

Your email address will not be published. Required fields are marked *

Don't Miss

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಗೋಚರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು....

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ...

Related Articles

ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ

ಶೃಂಗೇರಿ: ಮೂಲಸೌಕರ್ಯ ಕಲ್ಪಿಸಬೇಕಾದ ಅಧಿಕಾರಿಗಳು ಶೌಚಾಲಯ ನೀಡಲೂ ಜಾತಿ ಕೇಳುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು...

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ...

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು...

ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಚಿಕ್ಕಮಗಳೂರು: ಸಮಾಜದಲ್ಲಿ ದುಡಿದಿದ್ದನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಉದ್ಯಮಿ...