ಚಿಕ್ಕಮಗಳೂರು: ನಗರದ 18ನೇ ವಾರ್ಡ್ ವ್ಯಾಪ್ತಿಯ ಕಲ್ಲೊಡ್ಡಿ-ಶಾಂತಿನಗರ ಪ್ರದೇಶ ಗ್ರಾಮವಾಗಿ ನಿರ್ಮಾಣಗೊಂಡು 37 ವರ್ಷ ಕಳೆದರೂ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಹಾಗೂ ನಿವೇಶನಗಳ ಖಾಯಂ ಹಕ್ಕುಪತ್ರ ದೊರೆಯದೆ ವಂಚಿತರಾಗಿದ್ದಾರೆ ಎಂದು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ರಾಜು ಆರ್. ಆರೋಪಿಸಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1989ರಲ್ಲಿ ಗ್ರಾಮವಾಗಿ ನಿರ್ಮಾಣಗೊಂಡ ಕಲ್ಲೊಡ್ಡಿ-ಶಾಂತಿನಗರದಲ್ಲಿ ಈವರೆಗೆ ಐದು ನಗರಸಭಾ ಚುನಾವಣೆಗಳು ಹಾಗೂ ಒಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿವೆ. ಆದರೆ ನಿವಾಸಿಗಳ ಪ್ರಮುಖ ಸಮಸ್ಯೆಯಾಗಿರುವ ನಿವೇಶನಗಳ ಹಕ್ಕುಪತ್ರದ ವಿಚಾರ ಮಾತ್ರ ಇನ್ನೂ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2001ರಲ್ಲಿ 94ಸಿ ಅನ್ವಯ ಅಕ್ರಮ-ಸಕ್ರಮ ಯೋಜನೆಯಡಿ ಸುಮಾರು 600 ನಿವೇಶನಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪೈಕಿ ಸುಮಾರು 600 ಮನೆಗಳಿಗೆ ಅಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ತಾತ್ಕಾಲಿಕ ಮಂಜೂರಾತಿ ಪತ್ರ (ಹಂಗಾಮಿ ಹಕ್ಕು) ನೀಡಿದ್ದರು. ಕೆಲವು ನಿವೇಶನಗಳಿಗೆ ಮಾತ್ರ ಖಾಯಂ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಫಲಾನುಭವಿಗಳಿಗೆ ಇದುವರೆಗೆ ಖಾಯಂ ಹಕ್ಕುಪತ್ರ ನೀಡಿಲ್ಲ ಎಂದು ಅವರು ತಿಳಿಸಿದರು.
ಕಳೆದ 25 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರಸಭೆಗೆ ನಿರಂತರವಾಗಿ ಅರ್ಜಿ, ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
2016ರಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಯಾದ ಸಂದರ್ಭದಲ್ಲಿ 94ಸಿಸಿ ಅನ್ವಯ ಸುಮಾರು 450ಕ್ಕೂ ಹೆಚ್ಚು ಫಲಾನುಭವಿಗಳು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಸುಮಾರು 10 ವರ್ಷ ಕಳೆದಿದ್ದರೂ ಇದುವರೆಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇನ್ನೂ ಸ್ವಲ್ಪ ಸಮಯ ಕಳೆದರೆ ಈ ಯೋಜನೆಯ ಅರ್ಜಿಗಳ ದಶಮಾನೋತ್ಸವ ಆಚರಿಸುವುದೊಂದೇ ಬಾಕಿ ಎಂದು ರಾಜು ಆರ್. ವ್ಯಂಗ್ಯವಾಡಿದರು.
2017ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು 94ಸಿಸಿ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು 90 ದಿನಗಳೊಳಗೆ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕುಪತ್ರ ನೀಡಬೇಕು. ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸ್ಪಷ್ಟ ಆದೇಶ ನೀಡಿದ್ದರು. ಆದರೂ ಅಧಿಕಾರಿಗಳು ಈ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ನಗರಸಭೆಯು ನಿವಾಸಿಗಳಿಗೆ ಖಾಯಂ ಹಕ್ಕುಪತ್ರ ನೀಡದೆ, ಇದೇ ನಿವೇಶನಗಳಿಗೆ ತೆರಿಗೆ ವಸೂಲಿ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ರಾಜು ಆರ್. ಹೇಳಿದರು.
ನಿವೇಶನಗಳ ಗಾತ್ರ ಹಾಗೂ ಪ್ರಕರಣಕ್ಕೆ ಅನುಗುಣವಾಗಿ ₹5 ಸಾವಿರದಿಂದ ₹10 ಸಾವಿರ, ಕೆಲವೆಡೆ ₹30 ಸಾವಿರದವರೆಗೆ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಈ ಹಣ ಯಾವ ಖಾತೆಗೆ ಜಮೆಯಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯವಿದೆ ಎಂದರು.
ನಿವೇಶನಗಳ ಹಕ್ಕುಪತ್ರ ನೀಡದೆ ತೆರಿಗೆ ವಸೂಲಿ ಮಾಡಿರುವ ವಿಚಾರ ಸೇರಿದಂತೆ ಈವರೆಗೆ ವಸೂಲಾಗಿರುವ ಹಣದ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು. ವಸೂಲಾದ ಹಣ ಫಲಾನುಭವಿಗಳ ಖಾತೆಗೆ ಅಥವಾ ಸರ್ಕಾರದ ಯಾವ ಖಾತೆಗೆ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಿ, ತನಿಖೆಯ ವರದಿಯನ್ನು ಸಾರ್ವಜನಿಕವಾಗಿ ಪಾರದರ್ಶಕವಾಗಿ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
ಕಲ್ಲೊಡ್ಡಿ-ಶಾಂತಿನಗರದ ನಿವಾಸಿಗಳ ಬಹುದಿನಗಳ ಸಮಸ್ಯೆಗೆ ಜಿಲ್ಲಾಡಳಿತ, ನಗರಸಭೆ ಹಾಗೂ ಕಂದಾಯ ಇಲಾಖೆ ತಕ್ಷಣ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ಖಾಯಂ ಹಕ್ಕುಪತ್ರ ವಿತರಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಂತಿ ಫೆರ್ನಾಂಡಿಸ್, ವಿನುತ, ಗೋವಿಂದಣ್ಣ ಹಾಗೂ ಚಂದ್ರು ಉಪಸ್ಥಿತರಿದ್ದರು.
Vivekananda Yuvaka Sangha demands permanent title deed.
Leave a comment