ಚಿಕ್ಕಮಗಳೂರು: ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಅಡಗಿರುವುದು ಅಧಿಕಾರದ ವಿಕೇಂದ್ರೀಕರಣ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ತಲುಪುವುದರಲ್ಲಿದೆ. ಈ ಆಶಯವನ್ನು ಜೀವಂತವಾಗಿಡಲು ಯುವಸಮುದಾಯ ಜಾಗೃತರಾಗಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಪ್ರತಿಪಾದಿಸಿದರು.
ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ೧೨ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ಇತ್ತು. ಅಥೆನ್ಸ್, ಇಂಗ್ಲೆಂಡ್ಗಳಲ್ಲಿ ಪ್ರಜಾಪ್ರಭುತ್ವ ಬೆಳೆದು ಬಂದರೂ, ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಟ್ಟಿ ಬುನಾದಿ ಹಾಕಿದೆ ಎಂದು ಹೇಳಿದರು.
ಯಾವ ವ್ಯಕ್ತಿ ಶೋಷಣೆ ಹಾಗೂ ತುಳಿತಕ್ಕೆ ಒಳಗಾಗಿದ್ದನೋ, ಆತನೇ ತನ್ನ ಜ್ಞಾನದ ಬಲದಿಂದ ಉನ್ನತ ಪದವಿ ಪಡೆದು ದೇಶಕ್ಕೆ ಜಗತ್ತೇ ಮೆಚ್ಚುವಂತಹ ಸಂವಿಧಾನ ನೀಡಿದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಮೂಲಮಂತ್ರಗಳ ಮೇಲೆ ರೂಪುಗೊಂಡಿರುವ ಸಂವಿಧಾನದಲ್ಲಿ ಮಾನವೀಯತೆ ಹಾಗೂ ಸರ್ವಜನರ ಹಿತ ಅಡಗಿದೆ” ಎಂದರು.
ಪ್ರಜಾಪ್ರಭುತ್ವದ ಸೌಂದರ್ಯವೆಂದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದ ಸಾಮಾನ್ಯ ಕೂಲಿಕಾರ್ತಿಗೆ ಶ್ರೀಮಂತ ವ್ಯಕ್ತಿಯೂ ಕೈಮುಗಿದು ನಿಲ್ಲುವ ವಾತಾವರಣ ನಿರ್ಮಾಣವಾಗುವುದು. ರಾಜೀವ್ ಗಾಂಧಿ ಅವರು ತಂದ ೭೩ ಮತ್ತು ೭೪ನೇ ಸಂವಿಧಾನ ತಿದ್ದುಪಡಿಯ ಫಲವಾಗಿ ಅಧಿಕಾರ ವಿಕೇಂದ್ರೀಕರಣಗೊಂಡು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಿದೆ ಎಂದು ಸ್ಮರಿಸಿದರು.
ಮೊದಲೆಲ್ಲ ರಾಜಕಾರಣದಲ್ಲಿದ್ದವರಿಗೆ ಸಾಮಾಜಿಕ ಕಾಳಜಿ, ಬದ್ಧತೆ ಮುಖ್ಯವಾಗಿತ್ತು. ಆದರೆ ಇಂದು ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಗುತ್ತಿಗೆದಾರರು ಅಧಿಕಾರದ ಕೇಂದ್ರಬಿಂದುವಾಗುತ್ತಿರುವುದು ದುರಂತ. ಹಣದ ಪ್ರಭಾವದಿಂದ ಮತದಾನ ನಡೆಯುವ ವಾತಾವರಣ ಸೃಷ್ಟಿಯಾಗುತ್ತಿದ್ದು, ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವ ದಿನಾಚರಣೆ ಎನ್ನುವುದು ಕೇವಲ ಒಂದು ದಿನದ ಸರ್ಕಾರಿ ಕಾರ್ಯಕ್ರಮವಾಗಿ ಉಳಿಬಾರದು. ಅದು ಪ್ರತಿಯೊಬ್ಬರ ಜನಮಾನಸದಲ್ಲಿ ಜಾಗೃತಿ ಮೂಡಿಸಬೇಕು. ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುತ್ತಿರುವ ಯುವಕ-ಯುವತಿಯರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ವಿವೇಚನೆಯಿಂದ ಮತದಾನ ಮಾಡಬೇಕು” ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಉಪನ್ಯಾಸ ನೀಡಿ, ಮತದಾನ ಎನ್ನುವುದು ಸಂವಿಧಾನ ನಮಗೆ ನೀಡಿರುವ ಅತ್ಯಂತ ಶಕ್ತಿಶಾಲಿ ವಜ್ರಾಯುಧ. ಹಣ, ಹೆಂಡ, ಪ್ರಲೋಭನೆಗಳಿಗೆ ಬಲಿಯಾಗಿ ಮತ ಮಾರಿಕೊಂಡರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಶಿಸಿ, ಮತ್ತೆ ರಾಜಪ್ರಭುತ್ವದ ಆಡಳಿತ ತಲೆದೋರುವ ಅಪಾಯವಿದೆ ಎಂದರು.
ಸ್ವಾತಂತ್ರ್ಯಕ್ಕೆ ಮುನ್ನ ಶೇ ೧೭ರಷ್ಟು ಜಮೀನ್ದಾರರು, ತೆರಿಗೆದಾರರು ಹಾಗೂ ಪದವೀಧರರಿಗೆ ಮಾತ್ರ ಮತದಾನದ ಹಕ್ಕಿತ್ತು. ಆದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಸತತ ಶ್ರಮಿಸಿ ರೂಪುಗೊಂಡ ಭಾರತದ ಸಂವಿಧಾನವು, ೧೮ ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕು ನೀಡಿತು. ಈ ಹಿಂದೆ ಮಹಾರಾಣಿಯ ಗರ್ಭದಿಂದ ರಾಜ-ಮಹಾರಾಜರು ಹುಟ್ಟುತ್ತಿದ್ದ ಕಾಲವಿತ್ತು. ಆದರೆ ಇಂದು ಬ್ಯಾಲೆಟ್ ಬಾಕ್ಸ್ ಮೂಲಕ ಈ ದೇಶದ ಪ್ರಧಾನಿ, ಮುಖ್ಯಮಂತ್ರಿ, ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಸಾಮಾನ್ಯ ಪ್ರಜೆಗಿದೆ ಎಂದು ಅವರು ಸ್ಮರಿಸಿದರು.
ವೋಟ್ ಎಂದರೆ ಗರಿಗರಿಯ ನೋಟಲ್ಲ, ಕುಕ್ಕರ್, ಪಾತ್ರೆ, ಪ್ರೆಶರ್ ಕುಕ್ಕರ್ ಅಥವಾ ಬಿರಿಯಾನಿ ಪ್ಯಾಕೆಟ್ ಅಲ್ಲ. ವೋಟ್ ಎಂದರೆ ಹೆತ್ತ ಮಗು ಮತ್ತು ತಾಯಿಯಿದ್ದಂತೆ. ಅಂತಹ ಪವಿತ್ರ ಹಕ್ಕನ್ನು ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲು ಸಾಧ್ಯ ಎಂದರು.
ಅಂಬೇಡ್ಕರ್ ಅವರು ಹೇಳಿದಂತೆ ನಮ್ಮ ಸಾಮಾಜಿಕ ವ್ಯವಸ್ಥೆಯು ಮೆಟ್ಟಿಲುಗಳಿಲ್ಲದ ನಾಲ್ಕು ಅಂತಸ್ತಿನ ಕಟ್ಟಡದಂತಿದೆ. ಯಾವ ಅಂತಸ್ತಿನಲ್ಲಿ ಹುಟ್ಟುತ್ತಾರೋ ಅಲ್ಲೇ ಸಾಯಬೇಕಾದ ಸ್ಥಿತಿಯಿತ್ತು. ಅದನ್ನು ಸಂವಿಧಾನ ಮುರಿದು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ ೩೩ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಅನೇಕ ಕಡೆ ಮಹಿಳೆಯರು ಅಧ್ಯಕ್ಷರಾಗಿ, ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರೂ ಆಡಳಿತದ ಅಧಿಕಾರವನ್ನು ಅವರ ಪತಿ ಅಥವಾ ಗಂಡಸರೇ ಚಲಾಯಿಸುತ್ತಿರುವುದು ಪ್ರಜಾಪ್ರಭುತ್ವದ ಅಸಹಾಯಕತೆ. ಮಹಿಳೆಯರು ಸ್ವತಂತ್ರವಾಗಿ ತಮ್ಮ ಅಧಿಕಾರ ಚಲಾಯಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಬುದ್ಧನ ಕಾಲದ ಗಣತಂತ್ರ, ೧೨ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಹಾಗೂ ೧೨೧೫ರ ಮ್ಯಾಗ್ನಾಕಾರ್ಟಾ ಪ್ರಜಾಪ್ರಭುತ್ವದ ತಳಹದಿಯಾಗಿವೆ. ಸಂವಿಧಾನ ನೀಡಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ” ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಅರ್ಥ ಮತ್ತು ಮೌಲ್ಯಗಳು ಆಡಳಿತದ ವಿಕೇಂದ್ರೀಕರಣದ ಮೂಲಕ ಪ್ರತಿಯೊಬ್ಬ ಪ್ರಜೆಗೂ ತಲುಪುತ್ತಿವೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಲ್ಲಿ ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅರಿವು ಹೆಚ್ಚಿಸಲು ಈ ಬಾರಿ ’ಯುವ ಸಂಸತ್’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ ೧೬ ರಿಂದ ಅಕ್ಟೋಬರ್ ೧೦ ರವರೆಗೆ ತಾಲೂಕು ಮಟ್ಟದಲ್ಲಿ ಹಾಗೂ ಅಕ್ಟೋಬರ್ ೧೧ ರಿಂದ ೩೦ ರವರೆಗೆ ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ವಿಧಾನಸಭೆಯ ಮಾದರಿಯಲ್ಲಿ ತಾಲೂಕಿಗೆ ೧೨೪ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಯುವ ಸಂಸತ್ ಅಧಿವೇಶನ ನಡೆಸಲಾಗುವುದು. ತದನಂತರ ರಾಜ್ಯ ಮಟ್ಟದ ಯುವ ಸಂಸತ್ ನಡೆಯಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವಕ-ಯುವತಿಯರೂ ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಅಕ್ಟೋಬರ್ ೧, ೨೦೨೪ಕ್ಕೆ ೧೮ ವರ್ಷ ಭರ್ತಿಯಾಗುವ ಯುವಜನರು ಅಕ್ಟೋಬರ್ ೨೩ರ ಒಳಗಾಗಿ ತಮ್ಮ ವ್ಯಾಪ್ತಿಯ ಬಿಎಲ್ಒ ಮೂಲಕ ಫಾರ್ಮ್-೬ ಸಲ್ಲಿಸಬೇಕು. ಅಕ್ಟೋಬರ್ ೨೭ ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅರ್ಹರೆಲ್ಲರೂ ಹೆಸರು ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಕಾಲೇಜುಗಳಲ್ಲಿ ’ಚುನಾವಣಾ ಸಾಕ್ಷರತಾ ಸಂಘ’ಗಳ ಮೂಲಕ ಮತದಾನದ ಹಕ್ಕು, ಇವಿಎಂ ಕಾರ್ಯವೈಖರಿ ಹಾಗೂ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ನಿರಂತರ ಅರಿವು ಮೂಡಿಸಲಾಗುತ್ತಿದೆ ಎಂದರು.
ಸರ್ಕಾರದ ವತಿಯಿಂದ ಸಂವಿಧಾನದ ಪೀಠಿಕೆ, ಮೌಲ್ಯಗಳು ಹಾಗೂ ಕಾನೂನುಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಶ್ರಮಿಸಲಾಗುತ್ತಿದೆ. ಈ ಹಿಂದೆ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ (ಟ್ಯಾಬ್ಲೋ), ಬೀದರ್ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ಹಾಗೂ ಬೈಕ್ ರ್ಯಾಲಿಗಳ ಮೂಲಕ ಮಹತ್ವದ ಜಾಗೃತಿ ಮೂಡಿಸಲಾಗಿದೆ ಎಂದು ಸ್ಮರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಷ್ಟೇ ಅಲ್ಲದೆ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳನ್ನೊಳಗೊಂಡ ಮೂರು ಹಂತದ ಸ್ಥಳೀಯ ಸರ್ಕಾರಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿವೆ. ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳ ಮೂಲಕವೇ ಸೌಲಭ್ಯಗಳ ಅರ್ಹ ಫಲಾನುಭವಿಗಳ ಆಯ್ಕೆ ಮತ್ತು ಅಭಿವೃದ್ಧಿ ಯೋಜನೆಗಳ ನಿರ್ಧಾರವಾಗುತ್ತಿರುವುದು ನಿಜವಾದ ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣಕ್ಕೆ ಸಾಕ್ಷಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಹರೀಶ್ ಸಿಂಗಟಗೆರೆ, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಸಿ.ಟಿ.ಜಯಕುಮಾರ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನಟೇಶ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಜು, ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕಿ ಮಂಜುಳ, ಕೆ.ಡಿ.ಪಿ. ಸದಸ್ಯ ಲಕ್ಷ್ಮಣ್, ಮುಖಂಡರಾದ ಮರ್ಲೆ ಅಣ್ಣಯ್ಯ, ತರೀಕೆರೆ ವೆಂಕಟೇಶ್, ದೌರ್ಜನ್ಯ ನಿಯಂತ್ರಣ ಸಮಿತಿಯ ಲಕ್ಷ್ಮಣ್, ಅನಿಲ್ಕುಮಾರ್,. ನಂಜುಂಡಯ್ಯ, ಭೀಮಯ್ಯ, ವಸಂತ್, ರಾಜೇಶ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಅವರು ಸ್ವಾಗತಿಸಿದರು.
Let the youth step forward to uphold the ideals of democracy.
Leave a comment