ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.
ಕಂಸಾಗರ ಗ್ರಾಮದ ಕೆಂಚಪ್ಪ ಮೃತಪಟ್ಟವರು. ಜುಲೈ 31ರಂದು ಬೆಳಿಗ್ಗೆ ಸುಮಾರು 10.30ರ ವೇಳೆಗೆ ಕೆಂಚಪ್ಪ ಅವರು ತಮ್ಮ ಬಜಾಜ್ ಚೇತಕ್ ಸ್ಕೂಟರ್ (KA-03 EL-2182)ನಲ್ಲಿ ಕಡೂರು ಕಡೆಗೆ ತೆರಳುತ್ತಿದ್ದಾಗ, ರಾಜೀವ್ ಗಾಂಧಿ ಬಡಾವಣೆಯ ಆಂಜನೇಯ ದೇವಸ್ಥಾನದ ಎದುರು ರಸ್ತೆಗೆ ಏಕಾಏಕಿ ನಾಯಿ ಅಡ್ಡಬಂದಿದೆ.
ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಕೆಂಚಪ್ಪ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರಾದ ವೆಂಕಟೇಶ್ ಅವರು ಆಂಬ್ಯುಲೆನ್ಸ್ ಮೂಲಕ ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಬಳಿಕ ಚಿಕ್ಕಮಗಳೂರಿನ ಮಲ್ಲೇಗೌಡ ಆಸ್ಪತ್ರೆಗೆ, ಅಲ್ಲಿಂದ ಬೆಂಗಳೂರಿನ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಗಸ್ಟ್ 9ರವರೆಗೆ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆದರೆ ಆಗಸ್ಟ್ 15ರಂದು ಬೆಳಿಗ್ಗೆ ಸುಮಾರು 5.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಕೆಂಚಪ್ಪ ಮೃತಪಟ್ಟಿದ್ದಾರೆ. ಅಪಘಾತದ ಸಂದರ್ಭದಲ್ಲಿ ಯಾವುದೇ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಮೃತರ ಪತ್ನಿ ಪಾರ್ವತಮ್ಮ ಅವರು ಆಗಸ್ಟ್ 15ರಂದು ಕಡೂರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಅಪಘಾತ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Scooter accident: Death due to lack of treatment
Leave a comment