ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಸಹಕಾರ ಇಲಾಖೆಯಿಂದ ವಿಚಾರಣಾ ನೋಟಿಸ್ ಜಾರಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಏಪ್ರಿಲ್ ೩೦, ೨೦೨೬ರಂದು ಸಾರಿಗೆ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ, ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ಕಚೇರಿಯ ವಿವಿಧ ಕೆಲಸಗಳು ಮತ್ತು ದಾಖಲೆಗಳಿಗಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕಚೇರಿ ಮಟ್ಟದಲ್ಲಿ ಹಣ ಪಡೆಯಲಾಗುತ್ತಿದೆ. ಮೋಟಾರು ವಾಹನ ನಿರೀಕ್ಷಕರು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರಿಗೆ ಮಾಸಿಕ ಹಣ ನೀಡುವಂತೆ ನಿಗದಿ ಮಾಡಲಾಗಿದೆ. ಹಣ ನೀಡದೆ ದಾಖಲೆಗಳಿಗೆ ಸಹಿ ಮಾಡಲಾಗುತ್ತಿಲ್ಲ ಎಂಬ ಆರೋಪವನ್ನೂ ಮಾಡಲಾಗಿದೆ.
ಶಿವಮೊಗ್ಗದ ಜಂಟಿ ಸಾರಿಗೆ ಆಯುಕ್ತರ ವಿರುದ್ಧವೂ ಆರೋಪ ಮಾಡಿರುವ ದೂರುದಾರರು, ಅವರ ವ್ಯಾಪ್ತಿಯಲ್ಲಿರುವ ಆರ್‌ಟಿಒ ಕಚೇರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿ ಆರ್‌ಟಿಒ ಕಚೇರಿಯಿಂದ ಸುಮಾರು ೩ ಲಕ್ಷ ರೂ. ಹಣ ಪಡೆಯಲಾಗುತ್ತಿದೆ ಹಾಗೂ ಒಟ್ಟು ೧೩ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಭ್ರಷ್ಟಾಚಾರ ಆರೋಪದ ದೂರು ದಾಖಲಾದ ಹಿನ್ನೆಲೆಯಲ್ಲಿ ಆ. ೧೦ರಂದು ಚಿಕ್ಕಮಗಳೂರು ಆರ್ ಟಿ ಓ ಕಚೇರಿಯಲ್ಲಿ ದೂರಿನ ವಿಚಾರಣೆ ನಡೆಯದೆ. ಈ ಕುರಿತು ಸಾರಿಗೆ ಆಯುಕ್ತರು ದೂರುದಾರರು ಹಾಗೂ ಆರ್‌ಟಿಓ ಅಧಿಕಾರಿಗಳಿಗೆ ವಿಚಾರಣಾ ನೋಟೀಸ್ ಜಾರಿ ಮಾಡಿದ್ದಾರೆ.
ಆ. ೧೦ರಂದು ಬೆಳಗ್ಗೆ ೧೧ ಗಂಟೆಗೆ ಅಪರ ಸಾರಿಗೆ ಆಯುಕ್ತರು ದೂರುದಾರ ನೂರುಲ್ಲಾ ಖಾನ್, ಆರ್ ಟಿಓ ರಾಕೇಶ್ ಕುಮಾರ್, ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್ ಅವರ ವಿಚಾರಣೆ ನಡೆಸಲಿದ್ದಾರೆ. ಈ ವೇಳೆ ವಿಚಾರಣೆಗೆ ಪೂರಕವಾದ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
Hearing against RTO Rakesh Kumar today
Leave a comment