Home namma chikmagalur chikamagalur ಪಂಚಾಯತ್‌ರಾಜ್‌ನಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ
chikamagalurHomeLatest Newsnamma chikmagalur

ಪಂಚಾಯತ್‌ರಾಜ್‌ನಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ

Share
Share

ಚಿಕ್ಕಮಗಳೂರು:  ಭಾರತ ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಆದರೆ, ಇತ್ತೀಚೆಗೆ ಪಂಚಾಯತ್‌ರಾಜ್ ವ್ಯವಸ್ಥೆಯ ಅಧಿಕಾರ ಮೊಟುಕುಗೊಳಿಸುತ್ತಿರುವುದು ವಿಷಾದನೀಯ ಎಂದು ಎಂದು ಕೇಂದ್ರ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್ ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪಂಚಾಯತ್‌ರಾಜ್ ದಿನಾಚರಣೆ ಹಾಗೂ ಬೇಸಿಗೆ ಬೆಸುಗೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ ರಾಜಾಳ್ವಿಕೆಯಲ್ಲಿ ಶಾನುಭೋಗ, ಪಟೇಲರು ಅಧಿಕಾರ ಚಲಾಯಿಸುತ್ತಿದ್ದರು. ಸ್ವಾತಂತ್ರ್ಯ ನಂತರ ಗ್ರೂಪ್ ಪಂಚಾಯಿತಿ ಬಂತು. ರಾಜ್ಯದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ಬಂದ ನಂತರ ಕ್ರಾಂತಿಕಾರಕ ಬದಲಾವಣೆ ಕಂಡಿದ್ದು ರಾಮಕೃಷ್ಣ ಹೆಗಡೆ ಅವರ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಆಂದಿನ ಸರ್ಕಾರದಲ್ಲಿ ಪಂಚಾಯತ್‌ರಾಜ್ ಸಚಿವರಾಗಿದ್ದ ನಜೀರ್‌ಸಾಬ್ ಅವರು ಈ ವ್ಯವಸ್ಥೆಯನ್ನು ಬಹಳ ಗಟ್ಟಿ ಮಾಡಿದರು.

ಇದು ದೇಶದ ಕಣ್ಣನ್ನೇ ತೆರೆಸಿತು. ಕೇಂದ್ರದಲ್ಲಿ ಅಂದಿನ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅವರು ನಮ್ಮ ರಾಜ್ಯದ ಮಾದರಿ ಕಂಡು ಈ ವ್ಯವಸ್ಥೆಯನ್ನು ಇಡೀ ದೇಶಕ್ಕೆ ವಿಸ್ತರಿಸಿ ಅಧಿಕಾರ ವಿಕೇಂದ್ರಿಕರಣ ಮಾಡಬೇಕು ಎಂಬ ದೃಷ್ಟಿಯಿಂದ ಸಂವಿಧಾನದ ೭೭-೪೩ನೇ ವಿಧೇಯಕಕ್ಕೆ ತಿದ್ದುಪಡಿ ತಂದು, ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಇಡೀ ದೇಶಕ್ಕೆ ವಿಸ್ತರಿಸಿದರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ, ಮಂಡಲ ಪಂಚಾಯಿತಿಗಳಿದ್ದಾಗ ಗಟ್ಟಿಯಾಗಿಯೇ ಇದ್ದ ಈ ವ್ಯವಸ್ಥೆ ಇತ್ತೀಚೆಗೆ  ಸಡಿಲಗೊಂಡಿದೆ. ಅದನ್ನು ಶಾಸನ ಸಭೆಗಳು ಕಿತ್ತುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗ್ರಾಮೀಣಾಭಿವೃದ್ಧಿಯ ಗುರಿ ಸಾಧಿಸಲು ಜನಪ್ರತಿನಿಧಿ, ಅಧಿಕಾರಿಗಳು ಒಂದೇ ಗಾಡಿಯ ಎರಡು ಚಕ್ರಗಳಂತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣದ ಮಾದರಿ ದೇಶಕ್ಕೇ ದಾರಿದೀಪವಾಯಿತು. ನಂತರ ೭೩ ಮತ್ತು ೭೪ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನಾತ್ಮಕ ಮಾನ್ಯತೆ ದೊರೆತಿದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಿಂದ ಬೆಳೆದು ಬಂದ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಪುರಸಭೆಗಳ ಅಧಿಕಾರಿಗಳು ಎದುರಿಸುವ ಸವಾಲುಗಳ ಅರಿವು ಹೆಚ್ಚು. ಆದ್ದರಿಂದ ಜನಸೇವೆ ಮತ್ತಷ್ಟು ಪರಿಣಾಮಕಾರಿಯಾಗಲು ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ನಡುವೆ ಉತ್ತಮ ಹೊಂದಾಣಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲೆ ಸತತ ಎರಡನೇ ವರ್ಷವೂ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮದ ಪ್ರತಿಫಲವಾಗಿದೆ ಎಂದು ಶ್ಲಾಘಿಸಿದ ಅವರು, ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ ಅವರ ನೇತೃತ್ವದಲ್ಲಿ ಜಿಲ್ಲೆಯು ಹಲವು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಪ್ರಶಂಸಿಸಿದರು.

‘ಬೇಸಿಗೆ ಬೆಸುಗೆ’ ಕಾರ್ಯಕ್ರಮದಿಂದ ಗ್ರಾಮೀಣ ಮಕ್ಕಳಿಗೆ ಹಾಡುಗಾರಿಕೆ, ಮಿಮಿಕ್ರಿ, ಚದುರಂಗ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಕಲಿಯುವ ಅವಕಾಶ ದೊರೆತಿದೆ. ಈ ಹಿಂದೆ ನಗರ ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಇಂತಹ ಚಟುವಟಿಕೆಗಳನ್ನು ಗ್ರಾಮೀಣ ಮಕ್ಕಳಿಗೂ ತಲುಪಿಸಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಗ್ರಾಮೀಣ ಭಾಗದಲ್ಲಿ ಆರಂಭಿಸಿರುವ ಗ್ರಂಥಾಲಯಗಳು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಯುವಕರು ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ನಿರಂತರವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಎಸ್‌ಐಆರ್ ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪಡೆದ ಪಂಚಾಯಿತಿಗಳು ಅಲ್ಲಿಯೇ ನಿಲ್ಲದೆ ಮುಂದಿನ ವರ್ಷ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿಯೊಂದಿಗೆ ಕೆಲಸ ಮಾಡಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಯೋಗ ಹಾಗೂ ಪ್ರಾಣಾಯಾಮವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಮಕ್ಕಳಿಗೂ ‘ಬೇಸಿಗೆ ಬೆಸುಗೆ’ ಕಾರ್ಯಕ್ರಮ ತಲುಪಿಸಿರುವುದು ಶ್ಲಾಘನೀಯ ಸಾಧನೆ ಎಂದರು. ಮುಂದಿನ ವರ್ಷದಿಂದ ಈ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ, ಶಾಲಾ ಡ್ರಾಪ್‌ಔಟ್ ಹಾಗೂ ಹದಿಹರೆಯದ ಸಮಸ್ಯೆಗಳನ್ನು ತಡೆಗಟ್ಟಲು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾಡಾ ಯೋಜನೆ, ಎನ್‌ಆರ್‌ಇಜಿಎ ಸಹಯೋಗದ ನೀರು ನಿರ್ವಹಣಾ ಕಾರ್ಯಕ್ರಮ ಹಾಗೂ ಇ-ಸ್ವತ್ತು ಯೋಜನೆಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದ್ದು, ಪಿಡಿಒಗಳು ಹಾಗೂ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ‘ಬೇಸಿಗೆ ಬೆಸುಗೆ’ ಹಾಗೂ ‘ಭದ್ರಬಾಲ್ಯ’ ಕಾರ್ಯಕ್ರಮಗಳು ಮಕ್ಕಳ ಸೃಜನಶೀಲತೆ ವೃದ್ಧಿಸುವುದರ ಜೊತೆಗೆ ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ಹಾಗೂ ಶಾಲಾ ಡ್ರಾಪ್‌ಔಟ್ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು. ಜಿಲ್ಲೆಯ ಉತ್ತಮ ಆಡಳಿತ, ತೆರಿಗೆ ಸಂಗ್ರಹಣೆ ಹಾಗೂ ಸ್ವಚ್ಛತಾ ಸಾಧನೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ಪ್ರಾಸ್ತಾವಿಕವಾಗಿ ಮಾತನಾಡಿ, ಚೈತ್ರೋತ್ಸವ, ಭದ್ರಬಾಲ್ಯ, ಬೇಸಿಗೆ ಬೆಸುಗೆ ಮತ್ತಿತರೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳ ಪರಿಶ್ರಮ ಹೆಚ್ಚು, ಇದಕ್ಕೆ ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ. ತೆರಿಗೆ ವಸೂಲಿಯಲ್ಲಿ ನಮ್ಮ ಜಿಲ್ಲೆ ಶೇ.೧೦೦ ಸಾಧನೆ ಮಾಡಿದೆ. ಇದಕ್ಕೆ ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿ ಸಿಬ್ಬಂದಿಯ ಅವಿರತ ಪರಿಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ಸೇನೆಯ ನಿವೃತ್ತ ಉಪ ಮುಖ್ಯಸ್ಥ ಬಗ್ಗವಳ್ಳಿರಾಜು, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಸಾಧನೆ ತೋರಿದ ಅಧಿಕಾರಿ ಸಿಬ್ಬಂದಿ ಹಾಗೂ ಬೇಸಿಗೆ ಬೆಸುಗೆ ಶಿಬಿರ ನಡೆಸಿದ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಜಿ.ಪಂ. ಉಪಕಾರ್ಯದರ್ಶೀ ಗೌರವ ಕುಮಾರ್ ಶೆಟ್ಟಿ ಸ್ವಾಗತಿಸಿದರು.

Panchayat Raj brings revolutionary change in the country

Share

Leave a comment

Leave a Reply

Your email address will not be published. Required fields are marked *

Don't Miss

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಅಹ್ವಾನ

ಚಿಕ್ಕಮಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ...

ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಗುದ್ದಲಿ ಪೂಜೆ

ಚಿಕ್ಕಮಗಳೂರು: ಆರೋಗ್ಯ, ಶಿಕ್ಷಣ ಮತ್ತು ಜನರ ಬದುಕಿಗಾಗಿ ಆದ್ಯತೆಯ ಮೇಲೆ ಕೆಲಸ ಮಾಡಬೇಕಾಗಿರುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಆಗಿರುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ...

Related Articles

ಅಂಬೇಡ್ಕರ್ ವಸತಿ ಶಾಲೆಯಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಹಾಗೂ ಅರೆಬೆಂದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ...

15.99 ಲಕ್ಷ ಜನರ ಸಂಧ್ಯಾ ಸುರಕ್ಷಾ ಯೋಜನೆಯ ರದ್ದು

ಚಿಕ್ಕಮಗಳೂರು: ರಾಜ್ಯ ಸರಕಾರ ನೀಡುತ್ತಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪ್ರಯೋಜನ ೧೫.೯೯ ಲಕ್ಷ ಜನರಿಗೆ ರದ್ದಾಗಿದ್ದು...

ಅಯೋದ್ಯೆ ಹಣ ಕಳವು-ಸುಪ್ರೀಂನಿಂದ ಪಾರದರ್ಶಕ ತನಿಖೆಯಾಗಲಿ

ಚಿಕ್ಕಮಗಳೂರು: ಶ್ರೀರಾಮನ ಹೆಸರಲ್ಲಿ ಅಕಾರಕ್ಕೆ ಬಂದ ಬಿಜೆಪಿ ಶ್ರೀರಾಮನ ಟ್ರಸ್ಟ್ ಮೂಲಕ ಹಣಲೂಟಿ ಮಾಡಿದ್ದೇ ಸಾಧನೆಯಾಗಿದೆ....

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ....