ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸೇರಿದ ಏಳುನೂರುಖಾನ್ ಕಾಫಿ ತೋಟಕ್ಕೆ ಜೂನ್ 17, 21 ಮತ್ತು 22ರ ಮಧ್ಯರಾತ್ರಿ ಬಂದೂಕುಧಾರಿಗಳು ಅಕ್ರಮವಾಗಿ ನುಸುಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲಂದೂರು ಸಮೀಪದ ತೋಟದಮಕ್ಕಿ ಗ್ರಾಮದ ನಿವಾಸಿಗಳಾದ ಪುಟ್ಟಸ್ವಾಮಿ, ಗಿರೀಶ್ ಮತ್ತು ರಮೇಶ್ ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗೆ ಬಂದಿದ್ದ ಇನ್ನಿಬ್ಬರು ಸದ್ಯ ತಲೆಮರೆಸಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಈ ಶಸ್ತ್ರಧಾರಿಗಳು ಕಾಡುಪ್ರಾಣಿಗಳ ಬೇಟೆಗೆ ಬಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಈ ಸೂಕ್ಷ್ಮ ಪ್ರದೇಶದಲ್ಲಿ ಐದು ಮಂದಿಯ ತಂಡವು ಶಿಕಾರಿಗಾಗಿ ಬಂದೂಕು ಮತ್ತು ಮಾರಕಾಸ್ತ್ರಗಳೊಂದಿಗೆ ಸಂಚರಿಸಿದ್ದು ಸಿಸಿ ಕ್ಯಾಮೆರಾಗಳಲ್ಲಿ ಪತ್ತೆಯಾಗಿತ್ತು.
ಹುಲಿ ಮತ್ತು ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ತೋಟದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳು ಈ ಬೇಟೆಗಾರರ ಕೃತ್ಯವನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ತೋಟದ ಹಿರಿಯ ವ್ಯವಸ್ಥಾಪಕಿ ದಿವ್ಯ ಅವರು ನೀಡಿದ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಮಲ್ಲಂದೂರು ಪೊಲೀಸರು ಮೂವರನ್ನು ಜಾಲಕ್ಕೆ ಕೆಡವಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
Accused arrested for illegally entering Minister K.J. George’s coffee plantation
Leave a comment