ಚಿಕ್ಕಮಗಳೂರು: ತೋಟ ಹಾಗೂ ಮನೆಯ ಕೆಲಸಗಾರನಾಗಿ ಸುಮಾರು ಎರಡು ವರ್ಷಗಳಿಂದ ನಂಬಿಕಸ್ಥನಾಗಿದ್ದ ವ್ಯಕ್ತಿಯೊಬ್ಬನೇ ಮಾಲೀಕರ ಮನೆಯ ಲಾಕರ್ನಿಂದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಸವರವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಿ.ಹೆಚ್. ಮಂಜುನಾಥ್ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ ಮಂಗಳೂರು ಮೂಲದ ವಿನೋದ (50) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಜೂನ್ 17ರಂದು ಮನೆಯವರೆಲ್ಲರೂ ತೋಟಕ್ಕೆ ಗೊಬ್ಬರ ಹಾಕಲು ಹೋಗಿದ್ದಾಗ, ಸೊಸೆ ರಕ್ಷಿತಾ ಔಟ್ಹೌಸ್ ಸ್ವಚ್ಛಗೊಳಿಸುತ್ತಿದ್ದ ಸಮಯ ಸಾಧಿಸಿ ಈತ ಮೊದಲ ಮಹಡಿಯ ಬೆಡ್ರೂಮ್ ಕಬೋರ್ಡ್ ಲಾಕರ್ನಲ್ಲಿದ್ದ ₹7.50 ಲಕ್ಷ ಮೌಲ್ಯದ 51 ಗ್ರಾಂ ತೂಕದ ತಾಳಿಸರ, ₹3.30 ಲಕ್ಷ ಮೌಲ್ಯದ 22 ಗ್ರಾಂನ ಎರಡು ಕೈಬಳೆಗಳು, ₹1.80 ಲಕ್ಷ ಮೌಲ್ಯದ 12 ಗ್ರಾಂನ ಬ್ರೇಸ್ಲೆಟ್ ಹಾಗೂ ₹1,000 ನಗದನ್ನು ಕಳವು ಮಾಡಿದ್ದಾನೆ.
ಸಂಜೆಯಾದರೂ ಆತ ಕಾಣಿಸದಿದ್ದಾಗ ಮತ್ತು ಮೊಬೈಲ್ ಸ್ವಿಚ್ ಆಫ್ ಬಂದಾಗ ಅನುಮಾನಗೊಂಡು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಘಟನೆಯ ಸಂಬಂಧ ಆಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Jewellery worth lakhs of rupees stolen
Leave a comment