ಚಿಕ್ಕಮಗಳೂರು : ಆರ್ಎಸ್ಎಸ್ ನೊಂದಣಿ ಮಾಡಿಸಲು ಅವನಪ್ಪನಿಂದಲೂ ಆಗಲಿಲ್ಲ ಎಂದು ಪ್ರಿಯಾಂಕ ಖರ್ಗೆ ಬಗ್ಗೆ ಹೇಳಿರುವ ಸಿ.ಟಿ.ರವಿ ತಮ್ಮ ಮಾತಿನ ವರಸೆ ಬದಲಿಸಿಕೊಳ್ಳದಿದ್ದಲ್ಲಿ ಮುಂದೆ ಶೋಷಿತ ವರ್ಗದ ಅಪ್ಪಂದಿರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರವೀಶ್ಕ್ಯಾತನಬೀಡು ಹೇಳಿದರು.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಸ್ಥೆ ನೊಂದಣಿ ಮಾಡಿಸದೆ ಕಾರ್ಯಚಟುವಟಿಕೆ ಮಾಡುವುದು ಸಂವಿಧಾನಬಾಹಿರ. ಹೀಗಾಗಿ ಆರ್ಎಸ್ಎಸ್ ನೊಂದಣಿ ಮಾಡಿ ಎನ್ನುವ ಚಳವಳಿ ಈಗ ಅಗತ್ಯ. ಈ ಮಾತಿಗೆ ಅರ್ಥ ಬರುವಂತೆ ಪ್ರಿಯಾಂಕ ಖರ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
ಆದರೆ, ಸಿ.ಟಿ.ರವಿ ನಿಮ್ಮಪ್ಪನಿಂದಲೂ ಏನು ಮಾಡಲು ಆಗಿಲ್ಲ. ನೀನು ಏನು ಮಾಡುವೆ ಎಂದು ಪ್ರಶ್ನಿಸುವ ಮೂಲಕ ಆರ್ಎಸ್ಎಸ್ ನೈಜ ಸಂಸ್ಕೃತಿ ಏನೆಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಿದ್ರಾಮುಲ್ಲಾಖಾನ್ ಎಂದು ಹೇಳಿ ಸಿ.ಟಿ.ರವಿ ಯಾವ ಮೂಲೆ ಸೇರಿದರು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಮುಂದೆ ಶೋಷಿತ ವರ್ಗದ ಅಪ್ಪಂದಿರು ಅವರಿಗೆ ಸರಿಯಾದ ಮೂಲೆಯನ್ನು ಖಾಯಂ ಮಾಡುತ್ತಾರೆ. ಸಿ.ಟಿ.ರವಿ ಬಾಯಿ ಸರಿಯಿಲ್ಲ ಎನ್ನುವುದಕ್ಕೆ ನೂರಾರು ನಿದರ್ಶನಗಳಿವೆ. ಅವರು ಸಾರ್ವಜನಿಕ ನಡವಳಿಕೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಅವರ ಭಾಷೆ ನೋಡಿದರೆ ಆರ್ಎಸ್ಎಸ್ ಹೇಳಿಕೊಟ್ಟ ಸಂಸ್ಕೃತಿ ಎಂತದ್ದು ಎನ್ನುವುದು ಅರ್ಥ ಆಗುತ್ತದೆ ಎಂದರು. ದೇಶದಲ್ಲಿಸಂವಿಧಾನದತ್ತ ಜನಪರ ಸರಕಾರ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನೀಟ್ ಮೂಲಕ ಅನ್ಯಾಯ ಮಾಡಲಾಯಿತು. ಶಿಕ್ಷಣ ಸಚಿವಾಲಯದ ಕಚೇರಿಗೆ ಬೆಂಕಿ ಬಿತ್ತು. ರೆಫೆಲ್ ಫೈಲ್ಗೆ ಬೆಂಕಿ ಹಚ್ಚಿದರು.
ಪಶ್ಚಿಮ ಬಂಗಾಳದಲ್ಲಿ ೪ ಸಾವಿರ ಇವಿಎಂ ಯಂತ್ರಗಳು ಭಸ್ಮವಾದವು. ಈ ಬೆಂಕಿಯ ಹಿಂದೆ ಯಾವ ಚಾಣಕ್ಯ ನೀತಿ ಇದೆ ಎನ್ನುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಉತ್ತರ ಹೇಳಬೇಕು. ಬಿಜೆಪಿ ಯ ಯಾವೊಬ್ಬ ಮುಖಂಡನು ಈ ಘಟನೆಯನ್ನು ಖಂಡಿಸದೆ ಇರುವುದನ್ನು ನೋಡಿದರೆ ಇವರ ಚಾಣುಕ್ಯ ನೀತಿ ಏನೆಂಬುದು ಸಾರ್ವಜನಿಕರಿಗೆ ಅರ್ಥವಾಗುತ್ತದೆ ಎಂದರು.
ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಈ ೨ ಲೋಕ ದೃಷ್ಟಿಗಳು ಈಗ ಚರ್ಚೆಗೆ ಒಳಪಡುತ್ತಿವೆ. ಬಿಜೆಪಿ ಸಾವರ್ಕರ್ ವಿಚಾರಧಾರೆ ಜತೆ ಹೆಜ್ಜೆ ಹಾಕುತ್ತಿದ್ದರೆ, ಭಾರತದ ಹಿತದೃಷ್ಟಿಯಿಂದ ಅಂಬೇಡ್ಕರ್ ಲೋಕ ದೃಷ್ಟಿಯನ್ನು ಗಟ್ಟಿಮಾಡಬೇಕಾದ ಅಗತ್ಯ ಭಾರತೀಯರಿಗಿದೆ. ಬುದ್ದ , ಬಸವ, ಗಾಂಧಿ ವಿಚಾರಧಾರೆಗಳನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ಸಾರ್ವಜನಿಕರಿಗಿದೆ. ಸಂವಿಧಾನದ ಆಶಯಕ್ಕೆ ಕೇಡು ಉಂಟುಮಾಡುವ ಯಾವುದೇ ಸಂಘಟನೆ, ಯಾವುದೇ ಪಕ್ಷವಿದ್ದರೆ ಅವರು ನಿಜವಾದ ದೇಶದ್ರೋಹಿಗಳು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಮಾತನಾಡಿ ಸಿ.ಟಿ.ರವಿ ತನ್ನ ಮಾತಿನ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತನೋಜ್ ನಾಯ್ಡು, ಸಂತೋಷ್ ಲಕ್ಯಾ, ಎನ್.ಡಿ. ಚಂದ್ರಪ್ಪ, ರೂಬಿನ್ಮೊಸೆಸ್ ಇದ್ದರು.
CT Ravi gets a lesson from his fathers from the exploited class
Leave a comment