ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಡಿಸಿಯಾಗಿದ್ದ ಸಿ.ಎನ್.ಮೀನಾ ನಾಗರಾಜ್ ಅವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಸಿ ಹುದ್ದೆಗೆ ನಿಯುಕ್ತರಾದ ಎಂ.ಎನ್.ನಾಗರಾಜ್ ಅವರು ಗುರುವಾರ ಸಂಜೆ ಮೀನಾ ನಾಗರಾಜ್ ಅವರಿಂದ ಅಧಿಕಾರ ಸ್ವೀಕರಿಸಿದರು. ಇನ್ನು ಎಸ್ಪಿ ವಿಕ್ರಮ ಅಮಟೆ ಅವರ ವರ್ಗಾವಣೆಯಿಂದ ತೆರವಾಗಿದ್ದ ಚಿಕ್ಕಮಗಳೂರು ಎಸ್ಪಿಯಾಗಿ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅಧಿಕಾರ ವಹಿಸಿಕೊಂಡರು.
ಕಾಫಿನಾಡು ಚಿಕ್ಕಮಗಳೂರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಸಿ, ಎಸ್ಪಿ ಇಬ್ಬರು ಒಂದೇ ದಿನ ವರ್ಗಾವಣೆಯಾಗಿದ್ದಲ್ಲದೆ ಒಂದೇ ದಿನ ನೂತನ ಡಿಸಿ ಹಾಗೂ ಎಸ್ಪಿ ಅಧಿಕಾರ ವಹಿಸಿಕೊಂಡಿದ್ದು ಹಾಗೂ ಅದೂ ವರ್ಷದ ಮೊದಲ ದಿನವೇ ಆಗಿದ್ದು ವಿಶೇಷವಾಗಿತ್ತು.
ನಿಕಟಪೂರ್ವ ಎಸ್ಪಿ ವಿಕ್ರಮ ಅಮಟೆ ಅವರು ಮಧ್ಯಾಹ್ಮ ೧೨ ಗಂಟೆ ಒಳಗಾಗಿ ಚಿಕ್ಕಮಗಳೂರಿನ ಎಸ್ಪಿ ನಿವಾಸವನ್ನು ತೊರೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಚಿಕ್ಕಮಗಳೂರು ನೂತನ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ಬರುವುದು ತಡವಾಗಲಿದೆ ಎಂಬ ಕಾರಣದಿಂದಾಗಿ ವಿಕ್ರಮ ಅಮಟೆ ಅವರು ಚಿಕ್ಕಮಗಳೂರಿನಿಂದ ನಿರ್ಗಮಿಸಿದರು.
ಚಿಕ್ಕಮಗಳೂರಿನಿಂದ ವಿಕ್ರಮ ಅಮಟೆ ವರ್ಗಾವಣೆಯಾಗಿದೆ ಎಂಬುದು ತಿಳಿಯುತ್ತಿದ್ದಂತೆ ನೂರಾರು ಜನ ಎಸ್ಪಿ ನಿವಾಸದ ಎದುರು ಜಮಾಯಿಸಿದ್ದರು. ಜೊತೆಗೆ ಚಿಕ್ಕಮಗಳೂರಿನಲ್ಲಿ ಮಾಡಿದ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಭಾವನಾತ್ಮಕವಾಗಿ ಬೀಳ್ಕೋಡುಗೆ ನೀಡಿದರು.
ಇನ್ನು ಚಿಕ್ಕಮಗಳೂರು ಎಸ್ಪಿಯಾಗಿ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ ಜಿತೇಂದ್ರ ಕುಮಾರ್ ದಯಾಮ ಅವರು ಅಧಿಕಾರಿಗಳ ಬಳಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದರು. ಜಿತೇಂದ್ರ ಕುಮಾರ್ ದಯಾಮ ಅವರು ಚಿಕ್ಕಮಗಳೂರಿನಲ್ಲಿ ಮೂರು ತಿಂಗಳ ಕಾಲ ಪ್ರಭಾರ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲೆಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.
DC-SP takes charge on the same day
Leave a comment