ಚಿಕ್ಕಮಗಳೂರು: ಮೇಯಲು ತೆರಳಿದ್ದ ಕುರಿಗಳ ಹಿಂಡಿನಿಂದ ಆರು ಕುರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿರುವ ಆರೋಪದಡಿ ಇಬ್ಬರ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಕುಳಾರಹಳ್ಳಿ ಗ್ರಾಮದ ಗಂಗೇಗೌಡ (53) ಎಂಬುವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರುದಾರರು ಕೃಷಿ ಕೆಲಸದ ಜೊತೆಗೆ ಕುರಿ ಸಾಕಾಣಿಕೆ ಮಾಡಿಕೊಂಡಿದ್ದು, ಸುಮಾರು 200 ಕುರಿಗಳನ್ನು ಹೊಂದಿದ್ದಾರೆ. ಕುರಿಗಳನ್ನು ಕಾಯುವ ಕೆಲಸವನ್ನು ಅವರ ಅಕ್ಕನ ಗಂಡ ಮಂಜೇಗೌಡ ಎಂಬುವರು ಮಾಡುತ್ತಿದ್ದರು. ಅವರಿಗೆ ಸರಿಯಾಗಿ ತಿಳುವಳಿಕೆ ಇಲ್ಲದ ಕಾರಣ ಕುರಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಚಾರಿಸಿದಾಗ, ಗ್ರಾಮದ ಯೋಗೇಶ್ ಹಾಗೂ ದೇಗಲಾಪುರದ ರಾಜೇಗೌಡ ಎಂಬುವರು ಜೂನ್ 21ರಂದು ಬೆಳಗ್ಗೆ ಸುಮಾರು 10 ಗಂಟೆಗೆ ನಾಗರಹಳ್ಳಿ ಗುಡ್ಡದಲ್ಲಿ ಕುರಿಗಳು ಮೇಯುತ್ತಿದ್ದ ವೇಳೆ ಮೂರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡಿರುವುದು ತಿಳಿದುಬಂದಿದೆ ಎನ್ನಲಾಗಿದೆ.
ಇದಾದ ಎರಡು ದಿನಗಳ ಬಳಿಕ ಇದೇ ಇಬ್ಬರು ಮತ್ತೆ ನಾಗರಹಳ್ಳಿ ಗುಡ್ಡಕ್ಕೆ ತೆರಳಿ ಮತ್ತಷ್ಟು ಮೂರು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಗಂಗೇಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಕಳ್ಳತನವಾಗಿರುವ ಒಟ್ಟು ಆರು ಕುರಿಗಳ ಅಂದಾಜು ಮೌಲ್ಯ ₹45,000 ಎಂದು ತಿಳಿಸಲಾಗಿದೆ. ಈ ಕುರಿತು ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿ, ಕುಟುಂಬದಲ್ಲಿ ಚರ್ಚಿಸಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದರಿಂದ ದೂರು ನೀಡಲು ತಡವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕುರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿರುವ ಆರೋಪದಡಿ ಯೋಗೇಶ್ ಮತ್ತು ರಾಜೇಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗಂಗೇಗೌಡ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
6 sheep stolen in Nagarahalli hill
Leave a comment