ಕೊಪ್ಪ: ಮನೆಯಲ್ಲಿ ಕಪಾಟಿನಲ್ಲಿಟ್ಟಿದ್ದ ಸುಮಾರು 115 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿದ್ದು, ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪ ಪೊಲೀಸ್ ಠಾಣೆಗೆ ಜಿ.ಆರ್. ಪ್ರಮೋದ್ ಎಂಬುವರು ದೂರು ನೀಡಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರುವ ಪ್ರಮೋದ್ ಅವರು ಕುಟುಂಬದೊಂದಿಗೆ ಹಾಗೂ ತಂದೆ-ತಾಯಿಯೊಂದಿಗೆ ವಾಸವಾಗಿದ್ದಾರೆ.
ಬ್ಯಾಂಕ್ ಸಾಲ ತೀರಿಸಲು ಚಿನ್ನ ಅಡವಿಡುವ ಸಲುವಾಗಿ ತಾಯಿ ವಿನೋದಾ ಅವರ ಬಳಿ ಚಿನ್ನ ಕೇಳಿದ್ದಾರೆ. ಈ ವೇಳೆ ವಿನೋದಾ ಅವರು ಬೆಡ್‌ರೂಮ್‌ನ ಕಪಾಟು ತೆರೆದು ನೋಡಿದಾಗ ಬಾಕ್ಸ್‌ನಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ ಚಿನ್ನಾಭರಣಗಳಲ್ಲಿ ಸುಮಾರು 35 ಗ್ರಾಂ ತೂಕದ ಎರಡು ಎಳೆಯ ಚಿನ್ನದ ಕಡ್ಡಿ ಸರ, 40 ಗ್ರಾಂ ತೂಕದ ಎರಡು ಎಳೆಯ ಕೊತ್ತಂಬರಿ ಹಾರ, 32 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆ ಹಾಗೂ 8 ಗ್ರಾಂ ತೂಕದ ಚಿನ್ನದ ಉಂಗುರ ಸೇರಿದ್ದು, ಒಟ್ಟು ಸುಮಾರು 115 ಗ್ರಾಂ ತೂಕವಿದೆ. ಹಳೆಯ ಚಿನ್ನವಾಗಿದ್ದರಿಂದ ಇದರ ಅಂದಾಜು ಮೌಲ್ಯ ಸುಮಾರು ₹9 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿನ್ನಾಭರಣಗಳನ್ನು ಮನೆಯ ವಿವಿಧೆಡೆ ಹುಡುಕಾಡಿ, ಕುಟುಂಬದ ಸದಸ್ಯರನ್ನು ವಿಚಾರಿಸಿದರೂ ಪತ್ತೆಯಾಗಿಲ್ಲ. ಈ ವೇಳೆ ತಾಯಿ ವಿನೋದಾ ಅವರನ್ನು ವಿಚಾರಿಸಿದಾಗ, ವಯಸ್ಸು ಸುಮಾರು 65 ವರ್ಷವಾಗಿರುವುದರಿಂದ ಸರಿಯಾಗಿ ನೆನಪಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ಎಂಬಾತ ಕೆಲಸದ ನೆಪದಲ್ಲಿ ಬೆಡ್‌ರೂಮ್‌ನ ಕಡೆಗೆ ಬಂದು ಹೋಗುತ್ತಿದ್ದುದನ್ನು ತಾನು ನೋಡಿದ್ದಾಗಿ ತಾಯಿ ತಿಳಿಸಿದ್ದಾರೆ. ಹೀಗಾಗಿ ಪ್ರವೀಣನೇ ಚಿನ್ನಾಭರಣಗಳನ್ನು ಕಳ್ಳತನ ಮಾಡಿರಬಹುದು ಎಂಬ ಅನುಮಾನವಿದೆ ಎಂದು ಪ್ರಮೋದ್ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಹಾಗೂ ಕುಟುಂಬದ ಸದಸ್ಯರ ಬಳಿ ಹಲವು ಬಾರಿ ಹುಡುಕಾಟ ನಡೆಸಿದ ಬಳಿಕವೂ ಚಿನ್ನ ಪತ್ತೆಯಾಗದ ಹಿನ್ನೆಲೆಯಲ್ಲಿ ದೂರು ನೀಡಲು ತಡವಾಗಿದೆ ಎಂದು ತಿಳಿಸಲಾಗಿದೆ. ದೂರು ಸ್ವೀಕರಿಸಿರುವ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಿನ್ನಾಭರಣ ನಾಪತ್ತೆಯಾಗಿರುವ ಕುರಿತು ತನಿಖೆ ಮುಂದುವರಿಸಿದ್ದಾರೆ. ಪ್ರವೀಣನ ಮೇಲಿನ ಆರೋಪ ಇನ್ನೂ ತನಿಖೆಯಿಂದ ದೃಢಪಡಬೇಕಿದೆ.
Gold theft from domestic worker – 115 grams of gold missing
Leave a comment