Home namma chikmagalur chikamagalur ಎಸ್‌ಐಆರ್: ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟ
chikamagalurHomeLatest Newsnamma chikmagalur

ಎಸ್‌ಐಆರ್: ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟ

Share
Share

ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-೨೦೨೬) ಸಂಬಂಧ ಸೋಮವಾರ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಆರ್‌ಒಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ತರೀಕೆರೆ ಹಾಗೂ ಕಡೂರು ಇಆರ್‌ಒಗಳು ಬೆಳಿಗ್ಗೆ ೧೧ ಗಂಟೆಗೆ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಎಂದರು.

ಕಳೆದ ಜೂನ್ ೩೦ ರಿಂದ ಆಗಸ್ಟ್ ೧೭ ರವರೆಗೆ ಜಿಲ್ಲೆಯ ಬಿಎಲ್‌ಒ ಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ ಮತದಾರರ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿ, ಮಾಹಿತಿ ಸಂಗ್ರಹಿಸಿ ಯಶಸ್ವಿಯಾಗಿ ಸಂಗ್ರಹಿಸಿದ್ದಾರೆ. ಈ ಅವಧಿಯಲ್ಲಿ ಎಎಸ್‌ಡಿಡಿಒ (ಗೈರುಹಾಜರಿ, ಸ್ಥಳಾಂತರ, ಮರಣ, ಡಬಲ್ ಎಂಟ್ರಿ, ಇತರೆ) ಪಟ್ಟಿಯನ್ನು ಸಿದ್ಧಪಡಿಸಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಹಾಗೂ ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಮತ್ತು ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಕರಡು ಪಟ್ಟಿ ಪ್ರಕಟಣೆಯಾಗುತ್ತಿದ್ದಂತೆ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೩ ರವರೆಗೆ ಒಂದು ತಿಂಗಳ ಕಾಲ ಕಾಲಾವಕಾಶ ನೀಡಲಾಗಿದೆ. ಹೊಸ ಮತದಾರರ ಸೇರ್ಪಡೆಗೆ (೨೦೨೬ರ ಅಕ್ಟೋಬರ್ ೧ಕ್ಕೆ ೧೮ ವರ್ಷ ಪೂರ್ಣಗೊಂಡವರು) ಫಾರ್ಮ್-೬, ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಅಥವಾ ರದ್ದುಪಡಿಸಲು ಫಾರ್ಮ್-೭ ಹಾಗೂ ವಿಳಾಸ ಬದಲಾವಣೆ, ತಿದ್ದುಪಡಿ ಮತ್ತು ವರ್ಗಾವಣೆಗೆ ಫಾರ್ಮ್-೮ ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಇಸಿಐ ನೆಟ್ ಅಥವಾ ಎನ್‌ವಿಎಸ್‌ಪಿ ಫೋರ್ಟಲ್ ಮೂಲಕವೂ ಸಲ್ಲಿಸಬಹುದಾಗಿದೆ. ಫಾರ್ಮ್-೬ ಮತ್ತು ಫಾರ್ಮ್-೮ ಜೊತೆಗೆ ಸ್ವಯಂ ಘೋಷಣಾ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಆಗಸ್ಟ್ ೨೪ ರಿಂದ ಅಕ್ಟೋಬರ್ ೨೨ ರವರೆಗೆ ಕಾಲಾವಕಾಶವಿದ್ದು, ಅಗತ್ಯ ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಅಕ್ಟೋಬರ್ ೨೭ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನೋಟಿಸ್ ಪಡೆದ ಮತದಾರರು ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಅವರಿಗೆ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿ, ಶಾಲಾ ಕಟ್ಟಡ ಅಥವಾ ಸರ್ಕಾರಿ ಕಟ್ಟಡಗಳಲ್ಲೇ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಹೆಚ್ಚುವರಿ ‘ಎಇಆರ್‌ಒ’ಗಳ ನೇಮಕಕ್ಕೆ ಸಿಇಒ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಈ ಸ್ಥಳೀಯ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭಂವರ್ ಸಿಂಗ್ ಮೀನಾ ಹೇಳಿದರು.

ಮತದಾರರ ದಾಖಲೆ ಪರಿಶೀಲನೆಗೆ ಡಿಒ ಹಂತದಲ್ಲಿ ಪ್ರತ್ಯೇಕ ವ್ಯವಸ್ಥೆ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-೨೦೨೬) ಅಂಗವಾಗಿ ಕರಡು ಪಟ್ಟಿ ಪ್ರಕಟಣೆ ಹಾಗೂ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಸಲ್ಲಿಕೆಯಾಗುವ ದಾಖಲೆಗಳ ನೈಜತೆ ಪರಿಶೀಲನೆಗೆ ಜಿಲ್ಲಾ ಚುನಾವಣಾಧಿಕಾರಿ ಹಂತದಲ್ಲೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ಅರ್ಜಿಗಳಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿಗಳು, ಹಾಗೂ ಹೆಚ್ಚುವರಿ ಮತದಾರರ ನೋಂದಣಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಆದರೆ, ಸಲ್ಲಿಕೆಯಾದ ದಾಖಲೆಗಳ ನೈಜತೆಯನ್ನು ಸೂಕ್ತವಾಗಿ ಪರಿಶೀಲಿಸಲು ಇಆರ್‌ಒ ಲಾಗಿನ್‌ನಿಂದ ಡಿಒ ಲಾಗಿನ್‌ಗೆ ರವಾನೆಯಾಗುವಂತೆ ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಒ ಹಂತದಿಂದಲೇ ಸಂಬಂಧಿಸಿದ ಇಲಾಖೆಗಳಿಗೆ ಇಮೇಲ್ ಕಳುಹಿಸಿ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಅರ್ಜಿದಾರರು ಸಲ್ಲಿಸುವ ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ನೀಡಲಾದ ಪ್ರಮಾಣಪತ್ರ ಸೇರಿದಂತೆ ಯಾವುದೇ ಪ್ರಮುಖ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಆನ್‌ಲೈನ್ ಮೂಲಕವೇ ಪರಿಶೀಲಿಸಿ, ನೈಜತೆ ಖಚಿತಪಡಿಸಿಕೊಂಡ ನಂತರವೇ ಡಿಒ ಹಂತದಿಂದ ಅನುಮೋದನೆ ನೀಡಲಾಗುವುದು. ಈ ಅನುಮೋದನೆಯ ಆಧಾರದ ಮೇಲೆ ಇಆರ್‌ಒ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಹಾಗೂ ಪಾರದರ್ಶಕತೆ ತರಲು ಎರಡು ಹಂತದ ಮೇಲ್ಮನವಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಆರೊ ಅಥವಾ ಅಡಿಷನಲ್ ಇಆರ್‌ಒ ಕೈಗೊಳ್ಳುವ ತೀರ್ಮಾನದ ವಿರುದ್ಧ ಅಸಮಾಧಾನವಿದ್ದರೆ ಮತದಾರರು ಜಿಲ್ಲಾ ಚುನಾವಣಾಧಿಕಾರಿಗೆ ಮೊದಲ ಹಂತದ ಮೇಲ್ಮನವಿ ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ಚುನಾವಣಾಧಿಕಾರಿಗಳ ತೀರ್ಮಾನದ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಎರಡನೇ ಹಂತದ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೮,೬೩,೫೧೬ ಮತದಾರರಿದ್ದಾರೆ. ಈ ಪೈಕಿ ೪,೨೪,೭೯೨ ಪುರುಷರು, ೪,೩೮,೭೦೭ ಮಹಿಳೆಯರು ಹಾಗೂ ೧೭ ಇತರ ಮತದಾರರಿದ್ದಾರೆ. ಮತಗಟ್ಟೆಗಳ ದೃಢೀಕರಣ ಕಾರ್ಯದ ನಂತರ ಜಿಲ್ಲೆಯಲ್ಲಿ ೨೫ ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ ೧,೨೫೫ಕ್ಕೆ ಏರಿಕೆಯಾಗಿದೆ. ಈ ಮೊದಲು ೧೨೩೦ ಮತಗಟ್ಟೆಗಳಿದ್ದವು. ಪರಿಷ್ಕರಣೆಗೆ ಮೊದಲು ೯,೬೦,೨೩೧ ಮತದಾರರಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ೯೬,೭೧೫ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಆಕ್ಷೇಪಣಾ ಅವಧಿಯಲ್ಲಿ ಮತದಾರರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಹಾಜರಿದ್ದರು.

SIR: Draft voter list of the district published

Share

Leave a comment

Leave a Reply

Your email address will not be published. Required fields are marked *

Don't Miss

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ...

Related Articles

ಆರು ಜಿಲ್ಲೆಗಳ ಪ್ರತಿನಿಧಿಸುವ ಸಂಸದರ ಒಳಗೊಂಡ ಸರ್ವಪಕ್ಷದ ನಿಯೋಗ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಘೋಷಣೆಯಿಂದ ಮಲೆನಾಡಿನ ಜನಜೀವನದ ಮೇಲೆ ಉಂಟಾಗಲಿರುವ ಪರಿಣಾಮದ...

ಬಿಡದಿ ರೈತರ ಹೋರಾಟ ಬೆಂಬಲಿಸಿ ಆ.25ರಂದು ವಿಧಾನಸೌಧ ಚಲೋ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ...

ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಶೇ.35 ಮಳೆ ಕೊರತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಶೇ.೩೫ರಷ್ಟು ಮಳೆ ಕೊರತೆ ಉಂಟಾಗಿದೆ...

ಟಿಪ್ಪು ಸುಲ್ತಾನ್ ಕಟೌಟ್ ಗೆ ದೇಶದ್ರೋಹಿ ಹಾಡು-7 ಜನ ಪೊಲೀಸರ ವಶಕ್ಕೆ

ಚಿಕ್ಕಮಗಳೂರು: ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್...