ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಘೋಷಣೆಯಿಂದ ಮಲೆನಾಡಿನ ಜನಜೀವನದ ಮೇಲೆ ಉಂಟಾಗಲಿರುವ ಪರಿಣಾಮದ ಕುರಿತು ಮನವರಿಕೆ ಮಾಡಿಸಲು ಸದ್ಯದಲ್ಲೇ ಆರು ಜಿಲ್ಲೆಗಳನ್ನು ಪ್ರತಿನಿಧಿಸುವ ಸಂಸದರನ್ನು ಒಳಗೊಂಡ ಸರ್ವಪಕ್ಷದ ನಿಯೋಗದೊಂದಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಜಿಲ್ಲಾ ಬೆಳೆಗಾರರ ಸಂಘ(ಕೆಜಿಎಫ್), ರೈತ ಒಕ್ಕೂಟ, ಕಸ್ತೂರಿ ರಂಗನ್ ಹೋರಾಟ ವೇದಿಕೆ ಮತ್ತು ರೈತ, ದಲಿತ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ‘ಮಲೆನಾಡಿನ ಉಳಿವಿಗಾಗಿ ರೈತರ ಬದುಕಿಗಾಗಿ ಸಂಸದರೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ 20,668 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲು ಉದ್ದೇಶಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ 137 ಹಳ್ಳಿಗಳು ಸೇರಿ 10 ಜಿಲ್ಲೆಗಳ 1,449 ಗ್ರಾಮಗಳಿಗೆ ಪರಿಣಾಮ ಬೀರಲಿದೆ. ಎಲ್ಲಾ ಜಿಲ್ಲೆಗಳ ಸಂಸದರೊಂದಿಗೆ ಮಾತನಾಡಲಾಗುವುದು. ಅವರೊಂದಿಗೆ ಸ್ಥಳೀಯರ ಹೋರಾಟಗಾರರು, ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯಲಾಗುವುದು ಎಂದು ಹೇಳಿದರು.
ಕರಡು ಅಧಿಸೂಚನೆ ತಿರಸ್ಕರಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಕೂಡ ತೀರ್ಮಾನ ಕೈಗೊಂಡಿದೆ. ಇದರ ಜತೆಗೆ ಕೇರಳಂ ಮಾದರಿಯಲ್ಲಿ ಪ್ರತ್ಯೇಕ ಆಯೋಗ ರಚನೆ ಮಾಡಿ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಿದೆಯೇ ಎಂಬುದರ ಕುರಿತು ಚರ್ಚಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೂ ಮಾತನಾಡಿದ್ದು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಪದೇ ಪದೇ ಕರಡು ಅಧಿಸೂಚನೆ ಹೊರಡಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಕೇರಳಂನಲ್ಲಿ ಪ್ರತ್ಯೇಕ ಆಯೋಗ ರಚಿಸಿ ವರದಿ ಪಡೆದಿದೆ. ನಂತರ ಹತ್ತು ಅಂಶಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಅದೇ ಮಾದರಿ ಅನುಸರಿಸಿದರೆ ಮಲೆನಾಡಿನ ಜನರಿಗೆ ನ್ಯಾಯ ದೊರಕಿಸಲು ಸಾಧ್ಯವೇ ಎಂಬುದನ್ನೂ ಚರ್ಚಿಸಲಾಗುವುದು ಎಂದು ಹೇಳಿದರು.
‘ಇನ್ನು ಒಂದೂವರೆ ತಿಂಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆ ಸಂಬಂಧ ಸ್ಪಷ್ಟ ನಿಲುವನ್ನು ಎಲ್ಲಾ ಪಕ್ಷದವರು ಸೇರಿ ತೆಗೆದುಕೊಳ್ಳುತ್ತೇವೆ. ಮಲೆನಾಡಿನ ಜನರ ಬದುಕಿನ ಪ್ರಶ್ನೆ ಆಗಿರುವುದರಿಂದ ಎಲ್ಲಾ ಪಕ್ಷದವರು ಒಟ್ಟಾಗಿ ಹೋರಾಟ ನಡೆಸಬೇಕಿದೆ’ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ವೇದಿಕೆಯ ಎಸ್.ವಿಜಯಕುಮಾರ್, ‘ಪರಿಭಾವಿತ ಅರಣ್ಯ, ಸೆಕ್ಷನ್ -4 ಹೆಸರಿನಲ್ಲಿ ಮಲೆನಾಡು ಜನರ ಬದುಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶ ಫೋಷಣೆ ಮಾಡುವ ಮೂಲಕ ಜನರ ಎಲ್ಲಾ ಹಕ್ಕುಗಳನ್ನು ಕಸಿಯಲಾಗುತ್ತದೆ. ಇದನ್ನು ತಡೆಯಲು ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಟಿ.ರಾಜಶೇಖರ್, ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಂ, ರೈತ ಮುಖಂಡರಾದ ಡಿ.ಮಹೇಶ್, ಸುನೀಲ್‌ಕುಮಾರ್, ವಸಂತಕುಮಾರ್, ರತೀಶ್‌ಕುಮಾರ್, ಬಾಲಕೃಷ್ಣ, ದಲಿತ ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಹುಣಸೆಮಕ್ಕಿ ಲಕ್ಷ್ಮಣ್, ಕಾಂಗ್ರೆಸ್ ಮುಖಂಡ ಭರತ್ ಹಾಗೂ ಇತರರು ಭಾಗವಹಿಸಿದ್ದರು.
An all-party delegation comprising MPs representing six districts
Leave a comment