ಚಿಕ್ಕಮಗಳೂರು: ರಾಜ್ಯ ಸರ್ಕಾರ ಬರಗಾಲ ಪೀಡಿತ ತಾಲ್ಲೂಕುಗಳ ಘೋಷಣೆಯಲ್ಲಿ ತಾರತಮ್ಯ ನೀತಿ ಅನುಸರಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದ್ದು, ತಕ್ಷಣವೇ ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಗುರುಶಾಂತಪ್ಪ, ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕೊಪ್ಪ ಹಾಗೂ ಎನ್.ಆರ್.ಪುರ ತಾಲ್ಲೂಕುಗಳನ್ನು ಮಾತ್ರ ಪಟ್ಟಿಗೆ ಸೇರಿಸಿ, ಕಡೂರು ಮತ್ತು ಚಿಕ್ಕಮಗಳೂರು ಸೇರಿದಂತೆ ಇತರೆ ಪ್ರದೇಶಗಳನ್ನು ಕೈಬಿಟ್ಟಿರುವುದು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ ಎಂದು ದೂರಿದರು.
ಮುಂಗಾರು ಆರಂಭವಾದಂದಿನಿಂದಲೂ ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಮತ್ತು ಕಸಬಾ ಹೋಬಳಿಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಕಡೂರು ಭಾಗದ ಅನೇಕ ರೈತರು ಭೂಮಿಯನ್ನು ಹಸನು ಮಾಡಿದರೂ ಬಿತ್ತನೆ ಮಾಡಲಾಗದೆ ಜಮೀನು ಖಾಲಿ ಬಿಟ್ಟಿದ್ದಾರೆ. ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳಲ್ಲಿ ನೀರು ಬತ್ತಿದ್ದು, ಕೆರೆ-ಕಟ್ಟೆಗಳೂ ಒಣಗಿವೆ. ಜಾನುವಾರುಗಳಿಗೆ ಮೇವು ಒದಗಿಸುವುದೂ ಕಷ್ಟವಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಕೃಷಿ ಮಳೆಯನ್ನೇ ಅವಲಂಬಿಸಿದೆ. ಈ ವರ್ಷ ಇದುವರೆಗೆ ಅನೇಕ ಪ್ರದೇಶಗಳಲ್ಲಿ ರಾಗಿ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಸಾಧ್ಯವಾಗಿಲ್ಲ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಹಾಗೂ ಕಸಬಾ ಹೋಬಳಿಗಳಲ್ಲಿಯೂ ಬರದ ಪರಿಸ್ಥಿತಿ ತೀವ್ರವಾಗಿದೆ. ಕೊಳವೆಬಾವಿ ಆಶ್ರಿತ ರೈತರು ಅಲ್ಪಸ್ವಲ್ಪ ಬೆಳೆ ಬೆಳೆದಿದ್ದರೂ ಅಂತರ್ಜಲ ಕುಸಿತದಿಂದ ಬೆಳೆ ಕೈಗೆ ಬರುವ ಸ್ಥಿತಿ ಇಲ್ಲ. ಮುಂಗಾರು ಮುಗಿದು ಹಿಂಗಾರು ಆರಂಭವಾಗುತ್ತಿರುವ ಸಂದರ್ಭದಲ್ಲಿ ಮಳೆಯ ಕೊರತೆಯಿಂದ ಹಿಂಗಾರು ಬೆಳೆ ಬೆಳೆಯುವುದೂ ಅಸಾಧ್ಯವಾಗುವ ಆತಂಕವಿದೆ ಎಂದರು.
ರೈತರು ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಔಷಧಿಗಳಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಹಿಂಗಾರು ಬೆಳೆಗಾಗಿ ಮತ್ತೆ ಬಂಡವಾಳ ಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಳ್ಳು, ಸೂರ್ಯಕಾಂತಿ, ರಾಗಿ, ಜೋಳದಂತಹ ಬರನಿರೋಧಕ ಬೆಳೆಗಳನ್ನೂ ಬೆಳೆಯಲು ಸಾಧ್ಯವಾಗದಂತಹ ಸ್ಥಿತಿ ಇದೆ ಎಂದು ಹೇಳಿದರು.
ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಸಮರ್ಪಕವಾಗಿ ಬರ ಅಧ್ಯಯನ ನಡೆಸಿ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲವಾದರೆ ಹವಾಮಾನ ಆಧಾರಿತ ಬೆಳೆ ವಿಮೆಯ ಸೌಲಭ್ಯದಿಂದ ರೈತರು ವಂಚಿತರಾಗುವ ಸಾಧ್ಯತೆಯಿದೆ. ರೈತರು ಪಾವತಿಸಿರುವ ಲಕ್ಷಾಂತರ ರೂಪಾಯಿ ಬೆಳೆ ವಿಮೆ ಹಣವೂ ನಷ್ಟವಾಗುವ ಅಪಾಯವಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಗುರುಶಾಂತಪ್ಪ ಆಗ್ರಹಿಸಿದರು.
ಚಿಕ್ಕಮಗಳೂರು ತಾಲ್ಲೂಕನ್ನು ಬರಪಟ್ಟಿಯಿಂದ ಕೈಬಿಟ್ಟಿರುವ ವಿಚಾರದಲ್ಲಿ ಸ್ಥಳೀಯ ಶಾಸಕರ ವೈಫಲ್ಯವೂ ಎದ್ದು ಕಾಣುತ್ತಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಆಣೆವಾರು ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹವಾಮಾನ ಇಲಾಖೆಯ ಅಂದಾಜಿನಂತೆ ಮಳೆಯ ಪ್ರಮಾಣದಲ್ಲಿ ಭಾರಿ ಕೊರತೆ ಕಂಡುಬಂದಿದ್ದು, ಇದುವರೆಗೆ ಬಿತ್ತನೆಯ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ. ಬಿತ್ತಿರುವ ಬೆಳೆಗಳೂ ಸಮರ್ಪಕವಾಗಿ ಮೊಳಕೆಯೊಡೆಯದ ಪರಿಸ್ಥಿತಿ ಇದೆ. ಇದೇ ಸ್ಥಿತಿ ಮುಂದುವರಿದರೆ ಭತ್ತ, ರಾಗಿ, ಜೋಳದಂತಹ ಆಹಾರ ಬೆಳೆಗಳ ಉತ್ಪಾದನೆ ಕುಸಿದು ಆಹಾರ ಧಾನ್ಯಗಳ ಅಭಾವ ಉಂಟಾಗುವ ಸಾಧ್ಯತೆಯಿದೆ. ಅಡಿಕೆ, ತೆಂಗು ಸೇರಿದಂತೆ ಬಹುವಾರ್ಷಿಕ ಬೆಳೆಗಳಿಗೂ ಮಳೆ ಕೊರತೆಯಿಂದ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು.
ಕಡೂರು ತಾಲ್ಲೂಕು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ ಮತ್ತು ಕಸಬಾ ಹೋಬಳಿಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ರೈತರಿಗೆ ಅಗತ್ಯ ನೆರವು ನೀಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡು ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು. ಜೊತೆಗೆ ಬರದಿಂದ ಸಂಕಷ್ಟದಲ್ಲಿರುವ ರೈತರ ಎಲ್ಲ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿತು.
ಸುದ್ದಿಗೋಷ್ಠಿಯಲ್ಲಿ ಮಹೇಶ್, ಜಗದೀಶ್, ಲೋಕೇಶ್, ಈಶ್ವರಪ್ಪ, ಚಂದ್ರಶೇಖರ್ ಹಾಗೂ ನಿರ್ಮಲಾ ಉಪಸ್ಥಿತರಿದ್ದರು.
Farmers’ association demands inclusion of Kadur and Chikkamagaluru taluks in the list of farmers
Leave a comment