ಚಿಕ್ಕಮಗಳೂರು: ಬಸ್ ಹತ್ತುವ ವೇಳೆ ಉಂಟಾದ ಜನದಟ್ಟಣೆಯನ್ನೇ ದುರುಪಯೋಗಪಡಿಸಿಕೊಂಡು ವ್ಯಕ್ತಿಯೊಬ್ಬರ ಕೈಯಲ್ಲಿದ್ದ ₹2.33 ಲಕ್ಷ ಮೌಲ್ಯದ ಗೋಲ್ಡ್ ಮತ್ತು ಡೈಮಂಡ್ ಬ್ರೇಸ್‌ಲೆಟ್ ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರು ವೈಯಕ್ತಿಕ ಕೆಲಸದ ನಿಮಿತ್ತ ಆಗಸ್ಟ್ 26ರಂದು ಚಿಕ್ಕಮಗಳೂರಿಗೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 5 ಗಂಟೆಗೆ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಬೇಲೂರಿಗೆ ತೆರಳಲು ಪ್ಲಾಟ್‌ಫಾರಂನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು.
ಸಂಜೆ ಸುಮಾರು 5.15ಕ್ಕೆ ಬೇಲೂರಿಗೆ ತೆರಳುವ ಬಸ್ ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದ ಕಾರಣ ಬಸ್‌ನಲ್ಲಿ ತೀವ್ರ ಜನದಟ್ಟಣೆ ಇತ್ತು. ಈ ವೇಳೆ ದೂರುದಾರರು ತಮ್ಮ ಬಲಗೈಯಲ್ಲಿ 15.138 ಗ್ರಾಂ ತೂಕದ ಗೋಲ್ಡ್ ಮತ್ತು ಡೈಮಂಡ್ ಬ್ರೇಸ್‌ಲೆಟ್ ಧರಿಸಿಕೊಂಡು ಬಸ್ ಹತ್ತಿದ್ದರು.
ಬಸ್‌ನೊಳಗೆ ಮುಂದೆ ಸಾಗಿದ ಬಳಿಕ ಕೈ ನೋಡಿಕೊಂಡಾಗ ಬಲಗೈಯಲ್ಲಿದ್ದ ಬ್ರೇಸ್‌ಲೆಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಇದರ ಅಂದಾಜು ಮೌಲ್ಯ ₹2,33,000 ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಸ್ ಹತ್ತುವ ಸಂದರ್ಭದಲ್ಲಿ ಉಂಟಾದ ಜನದಟ್ಟಣೆಯನ್ನೇ ದುರುಪಯೋಗಪಡಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ಬ್ರೇಸ್‌ಲೆಟ್ ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕಳ್ಳತನದ ಬಳಿಕ ದೂರುದಾರರು ತಮ್ಮ ಸ್ವಂತ ಪ್ರಯತ್ನದಿಂದ ಆರೋಪಿಯನ್ನು ಪತ್ತೆಹಚ್ಚಲು ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಡವಾಗಿ ದೂರು ನೀಡಿರುವುದಕ್ಕೂ ಇದೇ ಕಾರಣ ಎಂದು ತಿಳಿಸಿದ್ದಾರೆ.
ಚಿನ್ನದ ಬ್ರೇಸ್‌ಲೆಟ್ ಕಳವು ಮಾಡಿರುವ ಅಪರಿಚಿತ ಆರೋಪಿಯನ್ನು ಪತ್ತೆಹಚ್ಚಿ, ಕಳುವಾದ ಆಭರಣವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Gold bracelet worth ₹2.33 lakh stolen while boarding bus
Leave a comment