ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಅವಧಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಅಹಿಂದ ಸಂಘಟನೆ ವತಿಯಿಂದ ಜ.6ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಜಿಲ್ಲಾಧ್ಯಕ್ಷ ತ್ರಿಭುವನ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ರಿಂದ ಪ್ರಸ್ತುತ ಅಧಿಕಾರದಲ್ಲಿದ್ದು, ಜ.6ಕ್ಕೆ 7ವರ್ಷ 7 ತಿಂಗಳು ಪೂರೈಸಿ 8ನೇ ತಿಂಗಳಿಗೆ ಮುಂದೂವರೆಯಲಿದೆ. ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ನಾಯಕರಾದ ಡಿ.ದೇವರಾಜ್ ಅರಸು ಅವರು 7 ವರ್ಷ 7 ತಿಂಗಳ ಅಧಿಕಾರದ ಅವಧಿ ದಾಖಲೆಯನ್ನು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗ ನಾಯಕ ಸಿದ್ದರಾಮಯ್ಯ ಅವರು ಮುರಿದಿರುವುದು ವಿಶೇಷವಾಗಿದೆ ಎಂದರು.
ಜ.6ರಂದು ಜಿಲ್ಲಾ ಅಹಿಂದ ಸಂಘಟನೆ ಸರ್ವಧರ್ಮ ಪ್ರಾರ್ಥನೆ ಆಯೋಜಿಸಿದ್ದು, ತಾಲೂಕು ಕಚೇರಿ ಸಮೀಪದ ಗಣಪತಿ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಆರೋಗ್ಯಕ್ಕಾಗಿ ಹಾಗೂ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದೂವರೆಯುವಂತೆ ಹಾಗೂ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವಂತೆ ವಿಶೇಷ ಪೂಜೆ ಸಲ್ಲಿಸಲಾಗುವುದು. ತಾಲೂಕು ಕಚೇರಿ ಮುಂಭಾಗದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಸಗುವುದು. ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್‌ವರೆಗೂ ಮೆರವಣಿಗೆ ನಡೆಸಿ, ಸಭೆ ನಡೆಸಲಾಗುವುದು. ನಂತರ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಕ್ತದಾನ ಶಿಬಿರ, ನೇತ್ರಾ ತಪಾಸಣೆ ಶಿಬಿರ, ಮಧುಮೇಹ ತಪಾಸಣೆ, ಸೇರಿದಂತೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಲಾಗುವುದು ಎಂದು ಹೇಳಿದರು.
ರೂಬೆನ್ ಮೋಸಸ್ ಮಾತನಾಡಿ, ಇದುವರೆಗೂ 25ಜನ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಐದು ವರ್ಷ ಪೂರ್ಣಗೊಳಿಸಿದ ಮುಖ್ಯ ಮಂತ್ರಿಗಳು ಮೂರು ಜನ ಮಾತ್ರ. ಅವರು ಕಾಂಗ್ರೆಸ್‌ನವರು ಎಂಬುದು ವಿಶೇಷ. ಎಸ್.ನಿಜಲಿಂಗಪ್ಪ ಅವರು ಕೃಷಿಕ್ಷೇತ್ರ ಸುಧಾರಣೆಗೆ ಶ್ರಮಿಸಿದರು. ದೇವರಾಜ್ ಅರಸು ಅವರು ಭೂ ಸುಧಾರಣೆ ಯೋಜನೆ ಜಾರಿಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಪಂಚಗ್ಯಾರೆಂಟಿ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ನೀಡಿ ನುಡಿದಂತೆ ನಡೆದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ರಸೂಲ್‌ಖಾನ್, ಪ್ರಸಾದ್ ಅಮಿನ್, ತನೂಜ್ ಕುಮಾರ್, ಜಗದೀಶ್, ಮಲ್ಲೇಶ ಸ್ವಾಮಿ ಸೇರಿದಂತೆ ಇತರರು ಇದ್ದರು.
Various programs by the district non-violent organization tomorrow
Leave a comment