ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ್ ೧೫೦೧ನೇ ಜನ್ಮದಿನದ ಅಂಗವಾಗಿ ಆಚರಿಸಲಾದ ಈದ್ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಬುಧವಾರ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು.
ನಗರದ ಅಂಡೇಛತ್ರದಿಂದ ಆರಂಭವಾದ ಮೆರವಣಿಗೆ ಮಹಾತ್ಮಗಾಂಧಿ ರಸ್ತೆ, ಇಂದಿರಾಗಾಂಧಿ ರಸ್ತೆ, ಕೆ.ಎಂ. ರಸ್ತೆ ಹಾಗೂ ಹನುಮಂತಪ್ಪ ವೃತ್ತದ ಮೂಲಕ ಸಾಗಿ, ಮತ್ತೆ ಎಂ.ಜಿ. ರಸ್ತೆಯ ಮೂಲಕ ಅಂಡೇಛತ್ರ ತಲುಪಿ ಮುಕ್ತಾಯಗೊಂಡಿತು. ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಮುಸ್ಲಿಂ ಸಮುದಾಯದವರು ಅಂಡೇಛತ್ರದಲ್ಲಿ ಸೇರಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈದ್ ಮಿಲಾದ್ ಅಂಗವಾಗಿ ಬುಧವಾರ ನಗರದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಕೆಂಪನಹಳ್ಳಿಯ ಈದ್ಗಾ ಮೈದಾನ ಹಾಗೂ ಒಕ್ಕಲಿಗರ ಸಮುದಾಯ ಭವನದ ಮುಂಭಾಗದಲ್ಲಿ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಶಾಂತಿ, ಸೌಹಾರ್ದತೆಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆ ಬಳಿಕ ಪರಸ್ಪರ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ನಂತರ ಬುಧವಾರ ಸಂಜೆ ಈದ್ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಮೆರವಣಿಗೆಯಲ್ಲಿ ಯುವಕರು ಹಾಗೂ ಬಾಲಕರು ಉದ್ದನೆಯ ಕೋಲುಗಳಿಗೆ ಕಟ್ಟಿದ್ದ ಹಸಿರು ಬಾವುಟಗಳನ್ನು ತಿರುಗಿಸುತ್ತಾ ಸಂಭ್ರಮಿಸಿದರು. ಹಲವರು ಹಣೆಗೆ ಹಸಿರು ಪಟ್ಟಿಯನ್ನು ಕಟ್ಟಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹೊಸ ಬಟ್ಟೆಗಳನ್ನು ಧರಿಸಿದ್ದ ಪುರುಷರು, ಯುವಕರು ಮತ್ತು ಬಾಲಕರು ಉತ್ಸಾಹದಿಂದ ಭಾಗವಹಿಸಿದ್ದರು. ಸ್ನೇಹಿತರು, ಸಂಬಂಧಿಕರು ಹಾಗೂ ಆತ್ಮೀಯರು ಪರಸ್ಪರ ಅಪ್ಪಿಕೊಂಡು ಈದ್ಮಿಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಡಿಜೆ ಸಂಗೀತಕ್ಕೆ ಯುವಕರು ಕುಣಿದು ಸಂಭ್ರಮಿಸಿದರೆ, ಉಪ್ಪಳ್ಳಿಯ ಯುವಕರ ತಂಡ ದಫ್ ಬಾರಿಸುತ್ತಾ ಹಾಡುಗಳಿಗೆ ಹೆಜ್ಜೆ ಹಾಕಿತು. ಮತ್ತೊಂದು ತಂಡ ಹಾಡುಗಳನ್ನು ಹಾಡುತ್ತಾ ಸಾಗಿದ್ದು, ಕೆಲವರು ಅದಕ್ಕೆ ಧನಿಗೂಡಿಸಿದರು. ಮೆರವಣಿಗೆಯಲ್ಲಿ ಪ್ರವಾದಿ ಮಹ್ಮದ್ ಅವರ ಪರವಾಗಿ ಜಯಕಾರಗಳೂ ಮೊಳಗಿದವು. ಗೌರಿಕಾಲುವೆಯ ೬೦ ಅಡಿ ರಸ್ತೆಯ ಬಾಲಕ ಫೈಜಾನ್ ಟಿಪ್ಪು ಸುಲ್ತಾನ್ ವೇಷ ಧರಿಸಿ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಹೂವುಗಳಿಂದ ಅಲಂಕರಿಸಲಾದ ಆಟೋಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಈದ್ಮಿಲಾದ್ ಅಂಗವಾಗಿ ನಗರದ ಪ್ರಮುಖ ವೃತ್ತಗಳು ಹಾಗೂ ಕೆಲವು ಬಡಾವಣೆಗಳನ್ನು ಹಸಿರು ಬಾವುಟಗಳಿಂದ ಅಲಂಕರಿಸಲಾಗಿತ್ತು. ಹನುಮಂತಪ್ಪ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು. ಮಹಾತ್ಮಗಾಂಧಿ ರಸ್ತೆ ಮತ್ತು ಇಂದಿರಾಗಾಂಧಿ ರಸ್ತೆಯುದ್ದಕ್ಕೂ ಹಸಿರು ಬಾವುಟಗಳನ್ನು ಕಟ್ಟಲಾಗಿತ್ತು.ಮೆರವಣಿಗೆಗೂ ಮುನ್ನ ಯುವಕರು ಬಿದಿರಿನ ಕೋಲು ಹಾಗೂ ಪೈಪ್ಗಳಿಗೆ ಹಸಿರು ಬಾವುಟಗಳನ್ನು ಕಟ್ಟಿಕೊಂಡು ಬೈಕ್ಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು. ಅಂಡೇಛತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮೆರವಣಿಗೆ ಆರಂಭವಾಗುವ ಸ್ಥಳದ ಮುಂಭಾಗದಲ್ಲಿ ಹೂವುಗಳಿಂದ ಸ್ವಾಗತ ಕಮಾನು ನಿರ್ಮಿಸಲಾಗಿತ್ತು.
ಮೆರವಣಿಗೆಯನ್ನು ವೀಕ್ಷಿಸಲು ನಗರದ ವಿವಿಧ ಭಾಗಗಳಿಂದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಮೆರವಣಿಗೆ ಸಾಗಿದ ಪ್ರಮುಖ ರಸ್ತೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.ಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ತಿರಂಗಾ ಯಾತ್ರೆ ತಾತ್ಕಾಲಿಕ ಮುಂದೂಡಿಕೆ
ಚಿಕ್ಕಮಗಳೂರು: ನಗರದ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಕಟೌಟ್ನ ವಿಡಿಯೊಗೆ ಪಾಕಿಸ್ತಾನ ಪರವಾದ ಹಾಗೂ ಪ್ರಚೋದನಕಾರಿ ಹಾಡು ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ಘಟನೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬೃಹತ್ ?ತಿರಂಗಾ ಯಾತ್ರೆ?ಯನ್ನು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಸಂಬಂಧ ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ಪೊಲೀಸರು ಮಾತುಕತೆ ನಡೆಸಿದ್ದು, ಮುಂದಿನ ವಾರದೊಳಗೆ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಹಾಗೂ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಸುಮಾರು ೪೦ ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ನ ವಿಡಿಯೊಗೆ ಪಾಕಿಸ್ತಾನ ಪರವಾದ ಹಾಡು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಾಡು ಹಾಕಿ ವಿಡಿಯೊವನ್ನು ಶೇರ್ ಹಾಗೂ ಲೈಕ್ ಮಾಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದರ ಜೊತೆಗೆ ಬೃಹತ್ ಮಟ್ಟದಲ್ಲಿ ತಿರಂಗಾ ಯಾತ್ರೆ ನಡೆಸಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
Leave a comment