ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಎಂಬ ಹೆಸರಿನಲ್ಲಿ ದೇಶದ ಮಹಿಳೆಯರನ್ನು ಮೋಸಗೊಳಿಸುವ ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವೆ ಮೋಟಮ್ಮ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೩ ರಲ್ಲಿ ಸರ್ವಾನುಮತದಿಂದ ಪಾಸಾದ ಮಹಿಳಾ ಮೀಸಲಾತಿ ಬಿಲ್ಲನ್ನು ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಗೋಸ್ಕರ ಮಾಡಲು ಮತ್ತೊಮ್ಮೆ ಮಂಡಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಹಿಳೆಯರಿಗೆ ಮಾಡಿರುವ ದೊಡ್ಡ ಮೋಸವಾಗಿದೆ ಎಂದು ತಿಳಿಸಿದರು.
ಎನ್‌ಡಿಎ ಸರ್ಕಾರ ಮಂಡಿಸಿರುವುದು ನಿಜವಾದ ಮಹಿಳಾ ಮೀಸಲಾತಿ ಮಸೂದೆ ಅಲ್ಲ. ಇದು ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮುನ್ನೆಲೆಗೆ ತರುವ ರಾಜಕೀಯ ಕುತಂತ್ರವಾಗಿದೆ. ಮಹಿಳಾ ಮೀಸಲಾತಿಯನ್ನು ಭವಿಷ್ಯದ ಜನಗಣತಿ ಮತ್ತು ಡಿಲಿಮಿಟೇಷನ್‌ಗೆ ಕಟ್ಟಿ ಹಾಕಲಾಗಿದೆ. ತಕ್ಷಣ ಜಾರಿಗೆ ತರಬಹುದಾದ ಶೇ.೩೩ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗಿದೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಇದು ಮಹಿಳಾ ಸಬಲೀಕರಣವಲ್ಲ ಬದಲಾಗಿ ಮಹಿಳೆಯರ ಹೆಸರಿನಲ್ಲಿ ರಾಜಕೀಯ ಕಾಲಹರಣವಾಗಿದೆ. ಲೋಕಸಭೆ ವಿರೋಧ ಪಕ್ಷಗಳ ಸ್ಪಷ್ಟ ನಿಲುವನ್ನು ತಕ್ಷಣ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಮಹಿಳೆಯರ ಹಕ್ಕುಗಳನ್ನು ಚುನಾವಣಾ ಆಯುಧವಾಗಿ ಬಳಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರೋಧವಾಗಿದೆ. ಮಹಿಳಾ ಮೀಸಲಾತಿಯನ್ನು ಕೇಂದ್ರ ಸರ್ಕಾರ ಮುಖವಾಡವಾಗಿ ಬಳಸುತ್ತಿದೆ. ಸಂವಿಧಾನಾತ್ಮಕ ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ದೂರಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಹಿಳೆಯರ ಏಳಿಗೆಗೆ, ಆರ್ಥಿಕ ಸ್ವಾವಲಂಬನೆಗೆ, ರಕ್ಷಣೆಗೆ ಉತ್ತಮವಾದ ಜನಪರವಾದ ಕಾನೂನನ್ನು ಜಾರಿಗೆ ತರಲಾಗಿತ್ತು. ಮಹಿಳೆಯರು ದುರ್ಬಲರಲ್ಲ ಸಬಲರು ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಯತ್ನಿಸಿದ್ದು, ಮಹಿಳೆಯರ ಮಮತೆಯ ಕಾರಣಕ್ಕಲ್ಲ ಬದಲಾಗಿ ತಮ್ಮ ಬಲ ಇರುವ ಸಂಖ್ಯಾಬಲ ಹೆಚ್ಚಿಸಲು, ಇವರಿಗೆ ಬೇಕಾಗಿರುವ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯ ಜಾರಿಗೆ ಎಂದು ಆರೋಪಿಸಿದರು.
೨೦೧೧ ರ ಜನಗಣತಿಯ ಮೂಲಕ ಸರಿಯಾದ ಮಾರ್ಗಸೂಚಿ ಇಲ್ಲದೆ, ಸರ್ವಾಧಿಕಾರ ಧೋರಣೆಯಿಂದ ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿದ್ದು, ಆಗ ಏಕೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಎನ್‌ಡಿಎ ಸರ್ಕಾರದ ರಾಜಕೀಯ ನಾಟಕ ಸತ್ಯ ಬಯಲಾಗಿದೆ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದರೆ, ಮೀರಾಕುಮಾರ್, ಪ್ರಪುಲ್ಲಾ ಪಾಟೀಲ್, ಇಂದಿರಾಗಾಂಧಿ ಉನ್ನತ ಹುದ್ದೆಗೇರಲು ಸಾಧ್ಯವೇ ಎಂದು ಹೇಳಿದರು.
ನಾರಿ ಶಕ್ತಿ ವಂದನಾ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಮೊಸಳೆ ಕಣ್ಣೀರಿಗೆ ದೇಶದ ಮಹಿಳೆಯರು ಮರುಳಾಗಬಾರದು. ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ಬಿಜೆಪಿ ಮೀನಾ ಮೇಷ ಏಣಿಸುತ್ತಿದೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಫಿ ಹೊಡೆದು ಬೇರೆ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ದುರ್ಬಳಕೆ ಮಾಡುತ್ತಿದೆ. ಮಹಿಳಾ ಮೀಸಲಾತಿ ಮಸೂದೆಗೆ ನ್ಯಾಯ ಸಿಗಬೇಕು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಲು ಅವಕಾಶ ಮಾಡುವಂತೆ ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮಾತನಾಡಿ, ಲೋಕಸಭೆ ಕ್ಷೇತ್ರ ಪುನರ್ ವಿಂಗಡನೆ ಹೆಸರಿನಲ್ಲಿ ಯಾವುದೇ ನಿಯಮಾವಳಿಯನ್ನು ಪಾಲಿಸದೇ ಶೈಕ್ಷಣಿಕವಾಗಿ ದಕ್ಷಿಣ ಭಾರತ ಮುಂದುವರೆಯುತ್ತಿರುವುದರಿಂದ ಇಲ್ಲಿನ ಮೀಸಲಾತಿಯನ್ನು ಕಡಿತಗೊಳಿಸಿ, ಉತ್ತರ ಭಾರತದ ಕಡೆ ಹೆಚ್ಚು ಸ್ಥಾನಗಳನ್ನು ಪಡೆಯಲು ಎನ್‌ಡಿಎ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
೨೦೧೧ ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶವನ್ನು ಆಧರಿಸಿ ಕ್ಷೇತ್ರ ಪುನರ್ ವಿಂಗಡನೆ ಮಾಡಿ ತಕ್ಷಣವೇ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ಒತ್ತಾಯ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಚಾಲಕಿ ಕವಿತಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಬನಾ ಸುಲ್ತಾನ್, ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಶ್ರೀನಿವಾಸ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.
The NDA government is trying to deceive the women of the country.
Leave a comment