ಚಿಕ್ಕಮಗಳೂರು: ಚಿನ್ನದ ಬೆಲೆ ಹೆಚ್ಚಳದಿಂದಾಗಿ ಶೇ.೮೦ ರಷ್ಟು ಗೋಲ್ಡ್ಸ್ಮಿತ್ ಕೆಲಸಗಾರರು ಕೆಲಸವಿಲ್ಲದೆ ಪೇಚಾಡುವಂತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಶ್ರೀಕಾಂತ್ ಗಾವಂಕರ್ ಒತ್ತಾಯಿಸಿದರು.
ಅವರು ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ದೈವಜ್ಞ ಸಂಘ, ಚಿಕ್ಕಮಗಳೂರು ದೈವಜ್ಞ ಬ್ರಾಹ್ಮಣ ಸಂಘ ಹಾಗೂ ಚಿಕ್ಕಮಗಳೂರು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೈವಜ್ಞ ಬ್ರಾಹ್ಮಣ ಸಮಾಜವು ಸಣ್ಣ ಸಮಾಜವಾಗಿರುವುದರಿಂದ ಹಾವನೂರು ವರದಿಯಲ್ಲಿ ೨ ಎ ವರ್ಗಕ್ಕೆ ಸೇರ್ಪಡೆಗೊಂಡಿದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.
ದೈವಜ್ಞ ಬ್ರಾಹ್ಮಣ ಸಮಾಜ ಸಂಘಟಿತರಾಗಿ ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಿದೆ. ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಸರ್ಕಾರದಿಂದ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿದರೆ ಕುಲಕಸುಬು ನಡೆಸುವವರಿಗೆ ಉದ್ಯೋಗಾವಕಾಶಗಳು ಲಭಿಸುತ್ತದೆ. ಉತ್ತರ ಕನ್ನಡ ಭಾಗ ಅಥವಾ ರಾಜ್ಯದ ಎಲ್ಲಿಯಾದರೂ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿದರೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು. ಮುಂಬೈನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಚಂದ್ರಶೇಖರ ರಾವ್ ಮಾತನಾಡಿ, ದೈವಜ್ಞ ಸಮಾಜದ ಮಹಿಳೆಯರು ಸಹಾನುಭೂತಿಯಿಂದ ಸಬಲೆಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ನಮ್ಮಲ್ಲಿ ಚಿನ್ನದ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಇದು ಸರಿಯಲ್ಲ. ಎಷ್ಟೋ ಯುವಕರು ಇಂಜಿನೀಯರ್ ಆಗಿದ್ದರೂ ಅವರ ವಿವಾಹ ವಿಚ್ಛೇದನ ಆಗುತ್ತಿದೆ. ಚಿನ್ನದ ಕೆಲಸ ಮಾಡುವ ಯುವಕರನ್ನು ವಿವಾಹವಾದವರು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಇದನ್ನು ಸಮಾಜ ಗಮನಿಸಿ ಚಿನ್ನದ ಕೆಲಸ ಮಾಡುವ ಯುವಕರ ವಿವಾಹ ಸಂಬಂಧ ಹೋರಾಟವನ್ನೇ ನಡೆಸಬೇಕಿದೆ ಎಂದರು.
ಅಖಿಲ ಕರ್ನಾಟಕ ದೈವಜ್ಞ ಬಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರೇಮಶೀಧರ್ ಶೇಟ್ ಮಾತನಾಡಿ ಮಹಿಳೆಯರು ಹೆಚ್ಚು ಸಂಘಟಿತರಾಗಬೇಕು, ಎಲ್ಲರು ಒಂದೆಡೆ ಸೇರಿಕೊಂಡು ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಮಾಡುತ್ತಿರುವುದು ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನ ರೈಲ್ವೇ ಇಲಾಖೆಯ ಸ್ಮಿತಾ ಎಂ.ರೇವಣ್ಣಕರ್, ಸಿದ್ದಾಪುರು ಆಂಜನೇಯ ದೇವಸ್ಥಾನದ ಧರ್ಮದರ್ಶಿ ಸಾವಿತ್ರಮ್ಮ ಕಾನಾಸೂರ್, ದೈವಜ್ಞ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಕೀರ್ತಿ ಶೇಟ್, ಮಹಿಳಾ ಸಂಘದ ಅಧ್ಯಕ್ಷೆ ಲತಾ ಸುಧೀರ್, ದೈವಜ್ಞ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷೆ ಶಾಲಿನಿ ಅಶೋಕ್ ರಾಯ್ಕರ್, ಉಪಾಧ್ಯಕ್ಷ ಸುಧಾಕರ ಶೇಟ್, ಸತ್ಯನಾರಾಯಣ ರಾಯ್ಕರ್, ಮಂಗಳೂರು ವಲಯ ಅಧ್ಯಕ್ಷ ಗಜೇಂದ್ರ ಶೇಟ್, ಶಿವಮೊಗ್ಗ ಅಧ್ಯಕ್ಷ ಮಂಜುನಾಥ ಶೇಟ್, ಗದಗ ಅಧ್ಯಕ್ಷ ರಾಮ್ದೇವ್ ವಿಶ್ವನಾಥ್, ಹಾಗೂ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
The government should establish a jewelry park and provide employment opportunities.
Leave a comment