ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು ಮುರಿದು ಬಿದ್ದಿದೆ.
ಘಟನೆಯ ತೀವ್ರತೆಗೆ ಆಟೋರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಗೂ ಸಹ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ
ಸಂಭವಿಸದೆ ದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ.
ಕಾಫಿನಾಡಿನಲ್ಲಿ ಮುಂದುವರಿದಿರುವ ವರುಣನ ಅಬ್ಬರದಿಂದ ಅವಾಂತರಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಬಲಿಗೆ ಗ್ರಾಮದಲ್ಲಿ ಸುರಿದ ಭಾರೀ ಗಾಳಿ-ಮಳೆಗೆ ದನದ ಕೊಟ್ಟಿಗೆಯ ಮೇಲೆ ಬೃಹತ್ ಮರವೊಂದು ಧರೆಗುರುಳಿದೆ. ಮರ ಬೀಳುವ ಆ ಕ್ಷಣದಲ್ಲಿ ಕೊಟ್ಟಿಗೆಯ ಒಳಗೇ ಇದ್ದ ಮನೆಮಾಲೀಕರು ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡು ಹೊರಬಂದಿದ್ದಾರೆ.
ಆದರೆ ಈ ದುರಂತದಲ್ಲಿ ಕೊಟ್ಟಿಗೆಯಲ್ಲಿದ್ದ ಎರಡು ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಟ್ಟಿಗೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಜೊತೆಗೆ ಹಸುಗಳ ಆಹಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಒಣ ಹುಲ್ಲು ಕೂಡ ಮಳೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಕಳಸ ತಾಲೂಕಿನಾದ್ಯಂತ ಮಳೆಯ ರೌದ್ರನರ್ತನ ಮುಂದುವರೆದಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗೆ ಭಾರೀ ನಷ್ಟ ಉಂಟಾಗುತ್ತಿದೆ.
A huge tree fell in Kalasa damaging an auto-rickshaw.
Leave a comment