ಚಿಕ್ಕಮಗಳೂರು: ಅಗಳಗಂಡಿ ಗ್ರಾಮ ಪಂಚಾಯಿತಿಯ ಹೆಗ್ಗಾರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹುಲ್ತಾಳ್, ನಕೃಗೋಳಿ, ಹಾಗೂ ಬಂಗಾಡಿ ಈ ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾಡೋಳಗೆ ಗಿಡ ನೆಡುವ ಯೋಜನೆಯನ್ನು ವಿರೋಧಿಸಿ ಇಂದು ಸಾಂಕೇತಿಕ ಉಪವಾಸ ಮುಷ್ಕರ ನಡೆಯಿತು .
ಸಾಕಷ್ಟು ಪ್ರತಿಭಟನೆಯ ನಂತರವೂ ಮತ್ತೆ ಕಾಡೊಳಗೆ ಗಿಡ ನೆಡಲು ಗುಂಡಿ ತೊಡಲು ಅರಣ್ಯ ಇಲಾಖೆ ಮುಂದಾಗಿದೆ. ಕೆಲಸ ತಡೆಯಲು ಹೋದಾಗ ಫಾರೆಸ್ಟರ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಅರಣ್ಯ ಇಲಾಖೆ ಕ್ರಮವನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ಮಾಡಲು ಗ್ರಾಮಸ್ಥರು ನಿರ್ಧರಿಸಿದ ಹಿನ್ನೆಲೆಯಲ್ಲಿ ಗಿಡ ನೆಡುವ ಕೆಲಸವನ್ನು ಸ್ಥಗಿತ ಗೊಳಿಸಿದ್ದು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಮಲೆನಾಡಲ್ಲಿ ಇಂತಹ ಯೋಜನೆಗಳು ಅವೈಜ್ಞಾನಿಕ ವಾಗಿದ್ದು,ಅನಾದಿಕಾಲದಿಂದಲೂ ಕಾಡಿನ ನಡುವೆ ಹಾಗೂ ಕಾಡನ್ನು ಉಳಿಸುತ್ತ,ಇಲ್ಲೇ ಇದ್ದು ಬದುಕನ್ನು ಕಟ್ಟಿ ಜೀವನ ಮಾಡಿಕೊಂಡು ಬದಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದರು.
ಈ ಹೊತ್ತಿನಲ್ಲಿ ಇಂತಹ ಯೋಜನೆಯನ್ನು ಜಾರಿ ತಂದು ಮಲೆನಾಡಿಗರ ಹಾಗೂ ಅದಿವಾಸಿ ಜನರ ನಿದ್ದೆ ಕೆಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಭಿಪ್ರಾಯಿಸಲಾಯಿತು. ಮಲೆನಾಡಿನ ಜನರು ನಾಗರ ಬನ, ದೇವರ ಬನ, ಸೊಪ್ಪಿನ ಹಾಡ್ಯಾ ಹಾಗೂ ಒಳಹಕ್ಲು ಎಂದು ಮನೆ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನು ರಕ್ಷಿಸಿಕೊಂಡು ಬಂದಿರುವುದನ್ನು ಉಲ್ಲೇಖಿಸಿದರು. ಸೆಕ್ಷನ್ 4(1), ಕಾಯ್ದೆಯಡಿ ಈ ಎಲ್ಲಾ ಕಾಡು ಗುಡ್ಡಗಳನ್ನು ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತ ಜನರ ಬದುಕನ್ನು ಕಿತ್ತುಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿದರು.
ಕನಿಷ್ಠ ಬದುಕನ್ನು ಕಟ್ಟಿಕೊಳ್ಳಲು ಮಾಡಿಕೊಂಡಿದ್ದ ಸಾಗುವಳಿ ಭೂಮಿಗೆ ಹಕ್ಕುಪತ್ರವನ್ನು ಈ ಕಾಯ್ದೆಗಳಿಂದ ಕೊಡಲಾಗುತ್ತಿಲ್ಲ. ತಕ್ಷಣ ಈ ರೀತಿಯ ಯೋಜನೆ ಕೈ ಬಿಟ್ಟು ಇಲ್ಲಿನ ಮೂಲನಿವಾಸಿಗಳಿಗೆ ಸಾಗುವಳಿ ಭೂಮಿಗೆ ಮತ್ತು ವಾಸಿಸುವ ಮನೆಗೆ ಹಕ್ಕುಪತ್ರವನ್ನು ನೀಡುವಂತೆ ಒತ್ತಾಯಿಸಲಾಯಿತು. ನೈಸರ್ಗಿಕವಾಗಿರುವ ಮಲೆನಾಡಿನ ಗುಡ್ಡ, ಕಾಡುಗಳನ್ನು ಅಲ್ಲಿನ ಜನರು ಹಿಂದೆ ಹೇಗೆ ರಕ್ಷಣೆ ಮಾಡಿಕೊಂಡು ಬಂದಿದ್ದರೋ ಹಾಗೆ ಆ ಹಕ್ಕನ್ನು ಹಕ್ಕು ಅಲ್ಲಿನ ಜನರಿಗೇ ನೀಡಬೇಕು. ಇಲಾಖೆಯ ಜನಪರ ಪರಿಸರ ಯೋಜನೆಗೆ ಇಲ್ಲಿನ ಜನರ ಸಹಕಾರ ಇರುತ್ತೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಂದಿನ ದಿನಗಳಲ್ಲಿ ಈ ರೀತಿಯ ಕಾಡುಪ್ರದೇಶದಲ್ಲಿ ಗಿಡ ನೆಡುವ ಯೋಜನೆಯನ್ನು ಮಲೆನಾಡಿನ ರೈತರೊಂದಿಗೆ ಸೇರಿ ವಿರೋಧಿಸಲು ತೀರ್ಮಾನಿಸಲಾಯಿತು. ಈ ಧರಣಿಯಲ್ಲಿ ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಕಲ್, ಕರ್ನಾಟಕ ಜನಶಕ್ತಿಯ ಮಹಿಳಾ ಮುನ್ನಡೆ ರಾಧ ಹಾಗಲಗಂಚಿ,ಪರಿಸರವಾದಿ ಗುರುಮೂರ್ತಿ ಜೋಗಿಬೈಲು, ಸುಲೋಚನಾ ಹುಲ್ತಾಳ್, ಲೀಲಾವತಿ, ಸುಶೀಲ,ಹೇಮಾ,ರಾಜೇಶ್,ವಿನಯ್, ಹರೀಶ್ ಹಾಗೂ ಗೋಪಾಲಗೌಡ ಭಾಗವಹಿಸಿದ್ದರು.
Strike against the plan to plant trees in the forest
Leave a comment