ಚಿಕ್ಕಮಗಳೂರು: ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ವಿಕೃತಗೊಳಿಸಿ ಸಂವಿಧಾನಕ್ಕೆ ಅಪಾಯ ತಂದೊಡ್ಡಿರುವ ಆರ್‌ಎಸ್‌ಎಸ್ ನೇತೃತ್ವದ ಸಂಘ ಪರಿವಾರದ ಪ್ಯಾಸಿಸ್ಟ್ ಶಕ್ತಿಯ ವಿರುದ್ಧ ಸೆ.೨೭ ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೋಮುವಾದಿ ಪ್ಯಾಸಿಸ್ಟ್ ವಿರೋಧಿ ಹೋರಾಟ ಸಮಿತಿ ಸಂಯೋಜಕ ಬಿ.ರುದ್ರಯ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದ, ಜಾತಿವಾದ, ಸಾಂಸ್ಕೃತಿಕ ರಾಷ್ಟ್ರೀಯ ವಾದವನ್ನು ಪ್ರತಿಪಾದಿಸುತ್ತಿರುವ ಆರ್‌ಎಸ್‌ಎಸ್ ಸಂಘ ಪರಿವಾರದ ವಿರುದ್ಧ ಜನಜಾಗೃತಿ ಮೂಡಿಸಲು ಪ್ರಜಾಪ್ರಭುತ್ವ ಉಳಿಯಲಿ-ಸರ್ವಾಧಿಕಾರ ತೊಲಗಲಿ ಎಂಬ ಘೋಷಣೆಯೊಂದಿಗೆ ಹಲವಾರು ಸಾಮಾಜಿಕ ಕಾರ್ಯಕರ್ತರು ಈ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಮಾಡಲಿದ್ದಾರೆಂದು ಹೇಳಿದರು.
ಒಂದು ದೇಶ ಒಂದೇ ಸಂಸ್ಕೃತಿ ಹೆಸರಿನಲ್ಲಿ ಬಹುಜನರ ಮಹತ್ವದ ಭಾರತದ ಮೇಲೆ ದೊಡ್ಡ ಗಧಾಪ್ರಹಾರ ನಡೆಸಿದೆ. ಪ್ರಜಾಪ್ರಭುತ್ವ, ಜಾತ್ಯಾತೀತ ಹಾಗೂ ಸಮಾಜವಾದಿ ತತ್ವಗಳನ್ನು ಪಾಶ್ಚಾತ್ಯ ತತ್ವಗಳೆಂದು ದಿಕ್ಕರಿಸಲು ಹೊರಟಿದೆ. ಸಾಮಾಜಿಕ ಮೀಸಲಾತಿಯನ್ನು ಕಟಿಬದ್ಧವಾಗಿ ವಿರೋಧಿಸುತ್ತಿದೆ. ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯವನ್ನು ಭಾರತದ ಸನಾತನ ಪರಂಪರೆ ಎಂದು ಕೊಂಡಾಡುತ್ತಿದೆ ಎಂದರು.
ಧಾರ್ಮಿಕ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ದೇಶದ ಬದ್ಧ ಶತೃಗಳೆಂದು ಬಿಂಬಿಸಲಾಗುತ್ತಿದೆ. ದಲಿತ, ಆದಿವಾಸಿ ಮಹಿಳೆಯರ ಮೇಲೆ ಇನ್ನಿಲ್ಲದ ವ್ಯವಸ್ಥಿತ ದಬ್ಬಾಳಿಕೆ ಮುಂದುವರೆದಿದ್ದು, ರೈತ ಕಾರ್ಮಿಕರ ವಿಷಯದಲ್ಲೂ ಕಡು ವಿರೋಧಿಯಾಗಿದೆ. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು, ಮತಪಟ್ಟಿಯಿಂದ ಮುಸಲ್ಮಾನರನ್ನು ತೆಗೆದುಹಾಕಬೇಕು ಎಂಬುದನ್ನು ವಿರೋಧಿಸುತ್ತೇನೆ ಎಂದರು.
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಬರುವ ಎಲ್ಲರನ್ನೂ ನಿರ್ನಾಮ ಮಾಡಬೇಕೆಂಬುದು ಹಿಂದುತ್ವ ವಾದಿಗಳ ಬಹಿರಂಗ ಕಾರ್ಯವಾಗಿದೆ. ೨೦೨೫ ಕ್ಕೆ ಜಗತ್ತಿನ ಅತಿದೊಡ್ಡ ಆತಂಕವಾದಿ ಆರ್‌ಎಸ್‌ಎಸ್ ಗೆ ನೂರು ವರ್ಷಗಳ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಧಮನಿತ ಜನಾಂಗಗಳಾದ ದಲಿತರು, ಮುಸಲ್ಮಾನರು, ಕ್ರೈಸ್ತರು, ಲಿಂಗಾಯತರು, ಬೌದ್ಧರು, ಜೈನರು, ಪಾರ್ಸಿ ಮುಂತಾದವರು ದುಡಿಯುವ ವರ್ಗಗಳಾದ ರೈತರು, ಕಾರ್ಮಿಕರು, ಪ್ರಜಾಪ್ರಭುತ್ವ ವಾದಿಗಳು ಒಗ್ಗೂಡಿ ಒಕ್ಕೂಟ ಶಕ್ತಿಯಾಗಿ ಪ್ಯಾಸಿಸ್ಟ್ ನೀತಿಯನ್ನು ವಿರೋಧಿಸಲು ಹೋರಾಟ ರೂಪಿಸುವ ಅಗತ್ಯ ಇದೆ ಎಂದರು.
ಒಂದು ದೇಶ ಒಂದು ಚುನಾವಣೆ ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿರುವ ಸಂಘ ಪರಿವಾರದ ದಾಳಿಯನ್ನು ಹಿಮ್ಮೆಟ್ಟಿಸಲು ಅದರ ಚರಿತ್ರೆಗಳ ಅರಿವನ್ನು ಸಾರ್ವಜನಿಕರಿಗೆ ಮೂಡಿಸುವ ಉದ್ದೇಶದಿಂದ ಅಂದು ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಶ್ರೀನಿವಾಸ್ ದಂಟರಮಕ್ಕಿ, ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಭೂಮಿಯ ಹಕ್ಕು, ವಸತಿ ಹೋರಾಟ ಸಮಿತಿ ಜಿಲ್ಲಾ ಮುಖಂಡ ಗೌಸ್ ಮುನೀರ್, ಪ್ರಗತಿಪರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಉಮೇಶ್‌ಕುಮಾರ್, ರೈತ ಸಂಘದ ಶಂಕರ್, ಪದ್ಮನಾಭ್ ಉಪಸ್ಥಿತರಿದ್ದರು.
Seminar to raise awareness against RSS fascist power on September 27
Leave a comment