Home namma chikmagalur chikamagalur  ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಪೋಷಕರು ನಿಗಾ ವಹಿಸಬೇಕು
chikamagalurHomeLatest Newsnamma chikmagalur

 ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಪೋಷಕರು ನಿಗಾ ವಹಿಸಬೇಕು

Share
Share

ಚಿಕ್ಕಮಗಳೂರು: ಮಕ್ಕಳು ಪ್ರತಿದಿನ ತಪ್ಪದೆ ಶಾಲೆಗೆ ಹಾಜರಾಗಬೇಕು. ಶಿಕ್ಷಣದಲ್ಲಿ ನಿರಂತರತೆ ಅತ್ಯಂತ ಮುಖ್ಯವಾಗಿದ್ದು, ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶಾಲಾ ಪ್ರಾರಂಭೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ   ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ಮಕ್ಕಳಿಗೆ ಸಾಂಕೇತಿಕವಾಗಿ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಇಂದಿನಿಂದಲೇ ಬಿಸಿಯೂಟ ಯೋಜನೆ ಕೂಡ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಗುವುದು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲಾಗುತ್ತಿದ್ದು, ಇವುಗಳನ್ನು ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಈ ಶಾಲೆ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಾಗುತ್ತಿದ್ದು, ಸರ್ಕಾರದ ವತಿಯಿಂದ ಕೆಲವು ಕಾರ್ಯಕ್ರಮಗಳು ಬಾಕಿ ಇವೆ. ಇದು ಕೆಪಿಎಸ್ ಶಾಲೆ ಆಗುವುದರಿಂದ ಶಾಲೆಯ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಇನ್ನಷ್ಟು ಉತ್ತಮಗೊಳ್ಳಲಿದೆ. ಈ ನಿಟ್ಟಿನಲ್ಲಿ ಶ್ರಮಿಸುವಂತೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಮನವಿ ಮಾಡಿದರು.

ಪ್ರತಿದಿನ ಶಾಲೆಗೆ ಬರುವುದರಿಂದ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೇವಲ ಪಠ್ಯ ಓದುವುದಷ್ಟೇ ಅಲ್ಲದೆ, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ಪಷ್ಟತೆ ಇರಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯಬೇಕು. ಯಾವುದಾದರೂ ಸಂಶಯಗಳಿದ್ದರೆ ಶಿಕ್ಷಕರನ್ನು ಮುಕ್ತವಾಗಿ ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು ಎಂದರು.

ಶಾಲೆಗಳಲ್ಲಿ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಕ್ರೀಡೆಗಳು, ಚರ್ಚಾ ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಇದು ಮಕ್ಕಳಲ್ಲಿ ಏಕತಾನತೆಯನ್ನು ತಪ್ಪಿಸುತ್ತದೆ. ಇದರೊಂದಿಗೆ ಶಾಲಾ ಹಂತದಲ್ಲಿ ರಕ್ತಹೀನತೆ ತಡೆಗಟ್ಟಲು ಬಿಸಿಯೂಟದಲ್ಲಿ ಪೌಷ್ಟಿಕ ತರಕಾರಿಗಳು, ಸೊಪ್ಪು ಹಾಗೂ ನುಗ್ಗೆಸೊಪ್ಪನ್ನು ಹೆಚ್ಚಾಗಿ ಬಳಸಬೇಕು. ಪೌಷ್ಟಿಕಾಂಶದ ಲಭ್ಯತೆಯಿಂದ ಮಕ್ಕಳ ಜ್ಞಾನಗ್ರಹಣ ಸಾಮರ್ಥ್ಯ ಮತ್ತು ದೈಹಿಕ ಬೆಳವಣಿಗೆ ಉತ್ತಮಗೊಂಡು, ವಾರ್ಷಿಕ ಪರೀಕ್ಷೆಗಳಲ್ಲಿ ಶಾಲೆಗೆ ಅತ್ಯುತ್ತಮ ಫಲಿತಾಂಶ ದೊರೆಯಲಿದೆ ಎಂದು ಅವರು ಆಶಿಸಿದರು.

ಜಿ.ಪಂ. ಸಿಇಒ ಕೀರ್ತನಾ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ನನಸಾಗಿಸಲು ಶ್ರದ್ಧೆ ಹಾಗೂ ಭಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕು. ಸರ್ಕಾರವು ಉಚಿತವಾಗಿ ಪಠ್ಯಪುಸ್ತಕಗಳು, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಹಾಗೂ ಹಾಲಿನ ಸೌಲಭ್ಯಗಳನ್ನು ನೀಡುತ್ತಿದೆ. ಇವೆಲ್ಲವನ್ನೂ ಉಚಿತವಾಗಿ ನೀಡುತ್ತಿರುವುದು ಸರ್ಕಾರಕ್ಕೆ ನಿಮ್ಮಿಂದ ಹಣ ಬೇಕು ಎಂದಲ್ಲ. ನೀವೆಲ್ಲರೂ ಚೆನ್ನಾಗಿ ಓದಿ, ಉತ್ತಮ ದೇಶಪ್ರೇಮಿಗಳಾಗಿ ಮತ್ತು ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂಬ ಏಕೈಕ ಉದ್ದೇಶದಿಂದ ಎಂದು ತಿಳಿಸಿದರು.

ನಮ್ಮ ಇಂದಿನ ಕನಸುಗಳು ಕೇವಲ ಸಣ್ಣ ಉದ್ಯೋಗಗಳಿಗೆ ಸೀಮಿತವಾಗಬಾರದು. ನಾವು ಡಾಕ್ಟರ್, ಸೈಂಟಿಸ್ಟ್, ಐಎಎಸ್ ಅಧಿಕಾರಿಗಳು ಮಾತ್ರವಲ್ಲ, ಪ್ರಧಾನಮಂತ್ರಿಯಾಗುವಂತಹ ದೊಡ್ಡ ಕನಸುಗಳನ್ನು ಕಾಣಬೇಕು. ನಮ್ಮ ಕನಸುಗಳನ್ನು ನನಸಾಗಿಸಲು ಇಡೀ ಸಮಾಜ, ಪೋಷಕರು ಹಾಗೂ ಶಿಕ್ಷಕರು ಸದಾ ಬೆಂಬಲ ನೀಡುತ್ತಾರೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ವರ್ಷದಲ್ಲಿ ಕನಿಷ್ಠ ೨೨೦ ದಿನಗಳ ಕಾಲ ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತೀರ್ಣಗೊಳಿಸುವ ಜವಾಬ್ದಾರಿ ಶಿಕ್ಷಕರದು ಎಂದರು.

ಇಂದಿನಿಂದ ಈ ಶಾಲೆಯು ಅಧಿಕೃತವಾಗಿ ’ಕರ್ನಾಟಕ ಪಬ್ಲಿಕ್ ಶಾಲೆ’ ಆಗಿ ಘೋಷಣೆಯಾಗಿದೆ. ಇಲ್ಲಿ ಎಲ್‌ಕೆಜಿಯಿಂದ ಹಿಡಿದು ೧೨ನೇ ತರಗತಿಯವರೆಗೆ ಒಂದೇ ಆವರಣದಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದ್ದು, ಸುಸಜ್ಜಿತ ಕಟ್ಟಡ, ಸುಧಾರಿತ ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಕೊಠಡಿಗಳನ್ನೊಳಗೊಂಡ ಮಾದರಿ ಶಾಲೆಯಾಗಿ ಇದು ಹೊರಹೊಮ್ಮಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಖಾಸಗಿ ಶಾಲೆಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಧಿಕಾರಿಗಳು, ಖಾಸಗಿ ಶಾಲೆಯವರು ತಮ್ಮ ಶಾಲೆಯ ಶೇ.೧೦೦ ರಷ್ಟು ಫಲಿತಾಂಶ ಪ್ರದರ್ಶಿಸುವ ಹಪಾಹಪಿಗೆ ಬಿದ್ದು, ಕಲಿಯಲು ಹಿಂದುಳಿದ ಹಾಗೂ ಅನುತ್ತೀರ್ಣರಾಗುವ ಮಕ್ಕಳನ್ನು ಗುರುತಿಸಿ ಅವರಿಗೆ ಬಲವಂತವಾಗಿ ವರ್ಗಾವಣೆ ಪತ್ರ ನೀಡಿ ಸರ್ಕಾರಿ ಶಾಲೆಗಳಿಗೆ ಕಳುಹಿಸುವ ತಂತ್ರ ಅನುಸರಿಸುತ್ತಿದ್ದಾರೆ. ಈ ಬಾರಿ ಅಂತಹ ಸುಮಾರು ೫೦ಕ್ಕೂ ಹೆಚ್ಚು ಪ್ರವೇಶಾತಿ ಅರ್ಜಿಗಳನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಲಾಗಿದೆ.

ಒಂಬತ್ತು ವರ್ಷಗಳ ಕಾಲ ದುಬಾರಿ ಶುಲ್ಕ ಪಡೆದ ಖಾಸಗಿ ಶಾಲೆಗಳೇ ಆ ಮಕ್ಕಳ ಜವಾಬ್ದಾರಿ ಹೊರಬೇಕು ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ವಾಪಸ್ ಕಳುಹಿಸಲಾಗಿದೆ. ಪೋಷಕರು ಮಕ್ಕಳಿಗೆ ೮ನೇ ತರಗತಿಯಲ್ಲೇ ನಮ್ಮ ಸರ್ಕಾರಿ ಶಾಲೆಗೆ ಪ್ರವೇಶ ಕೊಡಿಸಿದರೆ, ಎರಡು ವರ್ಷಗಳಲ್ಲಿ ಅವರನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ನಾವು ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಟ್ಟುನಿಟ್ಟಿನ ಸೂಚನೆಯಂತೆ ಜಿಲ್ಲೆಯಲ್ಲಿ ’ಭದ್ರ ಬಾಲ್ಯ’ ಕಾರ್ಯಕ್ರಮದಡಿಯಲ್ಲಿ ಯಾವುದೇ ಒಂದು ಮಗು ಕೂಡ ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗುತ್ತಿದೆ. ಶಿಕ್ಷಣ ಇಲಾಖೆಯು ಮಕ್ಕಳ ಭವಿಷ್ಯ ರೂಪಿಸಲು ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ. ಪೋಷಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು ಎಂದು ವಿನಂತಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ವಿಷಯ ಪರಿವೀಕ್ಷಕ ಕಾಂತರಾಜು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Parents should monitor their children’s school attendance.

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...