ನರಸಿಂಹರಾಜಪುರ: ‘ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ, ಗುಡ್ಡೆಹಳ್ಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗದ ಸೆರೆ ಕಾರ್ಯಾಚರಣೆ ಭಾನುವಾರ ಆರಂಭಿಸಲಾಗಿದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಸಚಿವರನ್ನು ಈಚೆಗೆ ಭೇಟಿ ಮಾಡಿ ಬೆಳೆ ಹಾನಿ ಮಾಡುತ್ತಿದ್ದ ಸಲಗವನ್ನು ಸೆರೆ ಹಿಡಿಯಲು ಆದೇಶ ಮಾಡಿಸಲಾಗಿತ್ತು.
ಅದರಂತೆ 6 ಆನೆಗಳನ್ನು ತರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಕೊಪ್ಪ ಅರಣ್ಯ ವಿಭಾಗದ ಡಿಎಫ್ ಶಿವಶಂಕರ್ ನೇತೃತ್ವ ವಹಿಸಿಕೊಂಡಿದ್ದಾರೆ. ಸಲಗ ಗ್ರಾಮದ ವ್ಯಾಪ್ತಿಯ ಗುಡ್ಡದ ಮೇಲೆ ಇರುವುದರಿಂದ ಅದನ್ನು ಸಮತಟ್ಟಾದ ಪ್ರದೇಶದ ಕಡೆ ಕರೆ ತರುವ ಪ್ರಯತ್ನ ಮಾಡಲಾಗಿದೆ ಎಂದರು.
ಕೊರಲು ಕೊಪ್ಪ ಭಾಗದಲ್ಲಿ 1, ಕೊಪ್ಪ ಭಾಗದಲ್ಲಿ 2 ಹಾಗೂ ಶೃಂಗೇರಿ ಭಾಗದ 2 ಕಾಡಾನೆಗಳು ಉಪಟಳ ನೀಡುತ್ತಿದ್ದು, ಇವುಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡಲಾಗಿದೆ. ಉಪಟಳ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಅವುಗಳನ್ನೂ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ರೈಲ್ವೆ ಬ್ಯಾರಿಕೇಡ್ ಮತ್ತು ಟೆಂಟಕಲ್ ಬೇಲಿ ಅಳವಡಿಸುವ ಬಗ್ಗೆ ಪ್ರಸ್ತಾವನೆ ಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಗಲಿದೆ ಎಂದರು.
ಮಳೆ ಕಡಿಮೆಯಾದ ಕೂಡಲೇ ರಸ್ತೆಯ ಗುಂಡಿ ಮುಚ್ಚಲು ಹಾಗೂ ರಸ್ತೆ ಸಂಪೂರ್ಣ ಶಿಥಿಲವಾದ ಕಡೆ ಮರುಡಾಂಬರೀಕರಣ ಮಾಡಲು ನಿರ್ಧರಿಸಲಾಗಿದೆ. ಮಳೆಗಾಲದಲ್ಲಿ 2 ಬಾರಿ ವೆಟ್ ಮಿಕ್ಸ್ ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿತ್ತು. ನಕ್ಸಲ್ ಪ್ಯಾಕೇಜ್‌ನಡಿ ₹7ಕೋಟಿ, ಅತಿವೃಷ್ಟಿ ಹಾನಿಗೆ ₹16 ಕೋಟಿ, ಎಸ್‌ಎಚ್‌ಜಿಪಿಯಿಂದ ₹80 ಕೋಟಿ, ಮುಖ್ಯಮಂತ್ರಿಯ ವಿಶೇಷ ಅನುದಾನದಿಂದ ₹50 ಕೋಟಿ ಅನುದಾನ ತರಲಾಗಿದೆ.
ಕೊಪ್ಪದಿಂದ ನರಸಿಂಹರಾಜಪುರ ತಾಲ್ಲೂಕಿನ ಕೊರಲುಕೊಪ್ಪ ಗ್ರಾಮವರೆಗೆ ರಸ್ತೆ ಅಭಿವೃದ್ಧಿಗೆ ₹19 ಕೋಟಿ, ವಸ್ತಾರೆಯಿಂದ ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹95 ಕೋಟಿ, ಕೊಪ್ಪ ಜಯಪುರ ರಸ್ತೆಗೆ ₹18 ಕೋಟಿ ಬಿಡುಗಡೆಯಾಗಿದೆ. 15 ಸೇತುವೆಗಳ ಅಭಿವೃದ್ಧಿಗೂ ಅನುದಾನ ಬಿಡುಗಡೆಯಾಗಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಮುಖಂಡರಾದ ಸದಾಶಿವ, ಪ್ರಶಾಂತ್ ಶೆಟ್ಟಿ, ಜುಬೇದಾ, ಸುನಿಲ್ ಕುಮಾರ್, ನಾಗರತ್ನ, ಶಿವಣ್ಣ, ಗಾಂಧಿ ಗ್ರಾಮ ನಾಗರಾಜ್ ಭಾಗವಹಿಸಿದ್ದರು.
Operation to capture lone wolf begins in Narasimharajapura
Leave a comment