ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷಕ್ಕೆ ಸೇರಿದ ನಿರ್ದೇಶಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವುದರಲ್ಲಿ ಅನುಮಾನವೇ ಇಲ್ಲ. ಇದರೊಂದಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ವಿಧಾನ ಪರಿಷತ್ ಸದಸ್ಯರು ಗೆಲುವು ಸಾಧಿಸಿದರೆ, ಶಾಸಕರೋರ್ವರು ಪರಾಭವ ಗೊಂಡಿದ್ದಾರೆ.
ಹೌದು. ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ಕಡೂರು ಶಾಸಕ ಕೆ.ಎಸ್.ಆನಂದ್ ಸ್ಪರ್ಧೆ ಮಾಡಿದ್ದರು. ಹೀಗಾಗಿಯೇ ಸಹಕಾರಿ ಸಂಘದ ಚುನಾವಣಾ ಕಣ ರಂಗೇರಿತ್ತು. ಆದರೆ ಇಬ್ಬರು ಪರಿಷತ್ ಸದಸ್ಯರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದರೆ, ಶಾಸಕರು ಪರಾಭವಗೊಂಡು ನಿರಾಸೆ ಅನುಭವಿಸಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟು ೧೩ ನಿರ್ದೇಶಕರ ಸ್ಥಾನಗಳ ಪೈಕಿ ೮ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದರೆ, ಇನ್ನುಳಿದ ೫ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ಕಣದಲ್ಲಿ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ಕೆ.ಎಸ್. ಆನಂದ್, ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ೧೦ ಮಂದಿ ಇದ್ದರು.
ನಾಲ್ಕು ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳ ಫಲಿತಾಂಶ ಕುತೂಹಲ ಮೂಡಿಸಿತ್ತು. ಈ ಕ್ಷೇತ್ರದಲ್ಲಿ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ನಿರಂಜನ್ ಸ್ಪರ್ಧೆ ಮಾಡಿದ್ದರು.
ನಿರಂಜನ್ ಅವರು ತಾವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದರು. ಅದ್ದರಿಂದ ಮುಂಜಾಗ್ರತೆಯಾಗಿ ಮೈತ್ರಿ ಪಕ್ಷಗಳ ಬೆಂಬಲಿತ ಸಹಕಾರ ಸಂಘಗಳ ಮತದಾರರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಶನಿವಾರ ಬೆಳಿಗ್ಗೆ ೯ ಗಂಟೆಗೆ ಇಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾವಣಾಧಿಕಾರಿ ಹಾಗೂ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಸುದರ್ಶನ್ ಹಾಗೂ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಶೆಟ್ಟಿ ಅವರು ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಚುನಾವಣೆ ಹಿನ್ನಲೆಯಲ್ಲಿ ಮತದಾನ ಕೇಂದ್ರದ ೧೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಮತದಾನ ಆರಂಭವಾಗುತ್ತಿದ್ದAತೆ ಪ್ರವಾಸ ತೆರಳಿದ್ದ ೨೮ ಮಂದಿ ಮತದಾರರು ಒಂದೇ ವಾಹನದಲ್ಲಿ ಆಗಮಿಸಿದರು. ಅವರೊಂದಿಗೆ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಹಾಜರಿದ್ದರು. ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ನೇರವಾಗಿ ಡಿಸಿಸಿ ಬ್ಯಾಂಕಿನ ಮತದಾನ ಕೇಂದ್ರದೊಳಗೆ ತೆರಳಿದರು. ಸಂಜೆ ೪ ಗಂಟೆಯ ವೇಳೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತು. ನಂತರ ಮತ ಎಣಿಕೆ ಆರಂಭಗೊAಡು ಸಂಜೆ ೫.೩೦ ರವೇಳೆಗೆ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು.
ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ ೩ ಮಂದಿಯ ಪೈಕಿ ಎಸ್.ಎಸ್. ಭೋಜೇಗೌಡ, ಸಿ.ಟಿ. ರವಿ ಜಯಗಳಿದ್ದು, ಎಂ.ಎಸ್. ನಿರಂಜನ್ ಪರಾಭವಗೊಂಡಿದ್ದಾರೆ. ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಬಿ.ಎಸ್.ಸತೀಶ್ ಅವರು ಜಯಗಳಿಸಿದ್ದು, ಯು.ಎಸ್.ಪ್ರಜ್ವಲ್, ಕೆ.ಎಸ್. ರವೀಂದ್ರ ಅವರು ಪರಾಭವಗೊಂಡಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಚ್.ಕೆ. ದಿನೇಶ್ ಹೊಸೂರು ಜಯಗಳಿಸಿದ್ದು, ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಅವರು ಪರಾಭವಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಟಿ.ಎಲ್.ರಮೇಶ್ ಜಯಗಳಿಸಿದರೆ, ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ.
NDA-backed candidates in DDC Bank director elections
Leave a comment