Home namma chikmagalur ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಲೋಕಾರ್ಪಣೆ
namma chikmagalurchikamagalurHomeLatest News

ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಲೋಕಾರ್ಪಣೆ

Share
Share

ಚಿಕ್ಕಮಗಳೂರು:ಮಹಾತ್ಮಾಗಾಂಧೀಜಿಯವರ ನೇತೃತ್ವದ ಅಹಿಂಸಾತ್ಮಕ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಮುಖ ಕಾರಣ ಎಂದು ಕರ್ನಾಟಕ ರಾಜ್ಯ ಇಂಧನ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.

ಬ್ರಿಗ್ರೆಡ್ ಫೌಂಡೇಶನ್ ನಗರದ ಹೊಸಮನೆ ವೃತ್ತದಲ್ಲಿ ಭವ್ಯವಾಗಿ ನಿರ್ಮಿಸಿರುವ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ’ವನ್ನು ಇಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕೆಲಸ ಈ ಮೂಲಕ ಆಗಿದೆ. ಜಿಲ್ಲೆಯ ಹಿರಿಯರೂ ನಾಯಕತ್ವವಹಿಸಿ ಹೋರಾಟ ಮಾಡಿದ್ದಾರೆ. ಇದೊಂದು ಅಪೂರ್ವ ಕಾರ್‍ಯ. ವಿಶೇಷವಾಗಿ ಯುವಜನತೆಗೆ ಸ್ಫೂರ್ತಿ ಮತ್ತು ಪ್ರೇರಣದಾಯಕವಾಗಿ ನಿರ್ಮಾಣಗೊಂಡಿದೆ ಎಂದು ಸಚಿವರು ಬ್ರಿಗೆಡ್ ಕಾರ್‍ಯವನ್ನು ಶ್ಲಾಘಿಸಿದರು.

ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ಕ್ರಾಂತಿಕಾರಿಗಳ ತ್ಯಾಗ ಬಲಿದಾನಗಳ ಕೊಡುಗೆ ಗಮನಾರ್ಹ. ಬ್ರಿಟೀಷ್ ಸೈನ್ಯದ ವಿರುದ್ಧ ಅನೇಕ ರಾಜಮಹಾರಾಜರೂ ಹೋರಾಟ ಮಾಡಿದ್ದಾರೆ. ಆದರೆ ಇದರಿಂದ ಸ್ವಾತಂತ್ರ್ಯ ಗಳಿಸಲಾಗಲಿಲ್ಲ. ಬ್ರಿಟೀಷರ ತುಪಾಕಿ, ಮದ್ದುಗುಂಡುಗಳ ಪರಿಣಿತಿ ವಿಶೇಷವಾಗಿತ್ತು. ಆದರೆ ಮಹಾತ್ಮಾಗಾಂಧೀಜಿ ಅವರ ಅಹಿಂಸಾ ರೀತಿಯ ಹೋರಾಟ ಬ್ರಿಟಿಷರು ಇಲ್ಲಿಂದ ತೆರಳುವಂತಾಯಿತು. ಗಾಂಧೀಜಿ ಅವರುಕೊಟ್ಟ ಸಹಿಷ್ಣುತೆ, ಸರ್ವಧರ್ಮ ಸಮಭಾವ, ರಾಮರಾಜ್ಯ ಪರಿಕಲ್ಪನೆ, ಗ್ರಾಮಸ್ವರಾಜ್ಯ ಕಾರ್‍ಯಕ್ರಮಗಳು ಸ್ವಾತಂತ್ರ್ಯ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂಬುದು ತಮ್ಮ ನಂಬಿಕೆ ಎಂದು ಸಚಿವ ಜಾರ್ಜ್ ನುಡಿದರು.

೧೯೬೯ರ ಸುಮಾರಿನಲ್ಲಿ ಚಿಕ್ಕಮಗಳೂರಿನೊಂದಿಗೆ ತಮಗೆ ನಂಟಿತ್ತು. ದೇವದಾನ, ಸೀಗೋಡು, ಭದ್ರಾ, ಸಂಗಮೇಶ್ವರ ಗ್ರೂಫ್ ಆಫ್ ಎಸ್ಟೇಟ್ಸ್‌ಗಳಲ್ಲಿ ಬೀಟೆಮರ ಖರೀದಿಸುವ ವ್ಯಾಪಾರದಲ್ಲಿ ಅರಣ್ಯ ಇಲಾಖೆಯೊಂದಿಗೆ ದಾಖಲಾತಿಗಳನ್ನು ನೀಡಿ ಅನುಮತಿ ಪಡೆಯುವ ಕೆಲಸ ನಿರ್ವಹಿಸುತ್ತಿದುದ್ದನ್ನು ನೆನಪಿಸಿಕೊಂಡ ಜಾರ್ಜ್, ರಾಜ್ಯ ಯುವಕಾಂಗ್ರೇಸ್ ಅಧ್ಯಕ್ಷರಾದ ಮೇಲೆ ಡಿ.ಬಿ.ಚಂದ್ರೇಗೌಡರ ಚುನಾವಣೆ ಸೇರಿದಂತೆ ಹಲವು ಬಾರಿ ಜಿಲ್ಲೆಯಲ್ಲಿ ಪಕ್ಷಸಂಘಟನೆಗಾಗಿ ತೊಡಗಿದ್ದನ್ನು ಉಲ್ಲೇಖಿಸಿ ಜಿಲ್ಲಾ ಉಸ್ತುವಾರಿ ಸಚಿವಸ್ಥಾನ ಅಪೇಕ್ಷಿಸಿದ್ದಲ್ಲ ಸಿ.ಎಂ.-ಪಕ್ಷ ನೀಡಿದ ಹೊಣೆಗಾರಿಕೆ. ಇಲ್ಲಿಯ ಶಾಸಕರನ್ನೆ ಮಂತ್ರಿಯಾಗಿಸಿ ಅವರಿಗೆ ಉಸ್ತುವಾರಿ ಸಚಿವಸ್ಥಾನ ನೀಡಬೇಕೆಂಬುದು ತಮ್ಮ ಅಪೇಕ್ಷೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಿಗ್ರೆಡ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಆರ್.ಜಯಶಂಕರ್ ಮಹಾತ್ಮಾಗಾಂಧೀಜಿ ಸೇರಿದಂತೆ ಹಲವರು ಸ್ವಾತಂತ್ರ್ಯಹೋರಾಟಕ್ಕೆ ಅಮೂಲ್ಯಸೇವೆ ಸಲ್ಲಿಸಿದ್ದು ಅವರೆಲ್ಲರ ನೆನಪಿಸುವ ಸ್ಮಾರಕ ನಮ್ಮೂರಿನಲ್ಲಿ ನಿರ್ಮಾಣಗೊಂಡಿದೆ. ಅವರ ಬಲಿದಾನ, ಭಾವ್ಯಕ್ಯತೆ, ಭರವಸೆ, ನಿಸ್ವಾರ್ಥವಾದ ತ್ಯಾಗ ಮನೋಭಾವ ಯುವಜನರಿಗೆ ಸ್ಫೂರ್ತಿಯಾಗಬೇಕೆಂಬ ಸದಾಶಯ ಇದೆ. ಸ್ಥಳೀಯ ಜನರಷ್ಟೆ ಅಲ್ಲ ಪ್ರವಾಸಿಗರನ್ನೂ ಸೆಳೆದು ಪ್ರೇರಣೆ ನೀಡುವ ತಾಣ ಇದಾಗಲಿದೆ ಎಂದರು.

ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು ಎಂದು ಲೋಕಮಾನ್ಯ ಬಾಲಗಂಗಾಧರ ಗುಡುಗಿದ್ದರೆ, ನಂಬಿಕೆ, ವಿಶ್ವಾಸ ಕಟ್ಟಿಕೊಟ್ಟವರು ನೆಹರು. ಸ್ವಾತಂತ್ರ್ಯ ಕೊಡೊದಲ್ಲ ಪಡೆಯುವುದು ಎಂದು ನೇತಾಜಿಸುಭಾಷ್ ಚಂದ್ರಬೋಸ್ ಹೇಳಿದ್ದರು. ಹಲವು ನಾಯಕರ ಸದ್ವಿಚಾರಗಳನ್ನು ನೆನಪಿಸುವ ಅಪೂರ್ವ ತಾಣವಾಗಿ ಸ್ಮಾರಕ ಮೈತಾಳಿದೆ. ಯುವಜನತೆಯನ್ನು ದೇಶಕಟ್ಟುವ ನಿಟ್ಟಿನಲ್ಲಿ ರೂಪುಗೊಳಿಸಲು ಸಹಕಾರಿಯಾಗಿ. ಆತ್ಮಾವಲೋಕನ ಸಂದರ್ಭವನ್ನು ಸೃಷ್ಟಿಸುವುದೆಂದು ಜಯಶಂಕರ್ ವಿವರಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಮಹಾತ್ಮಾಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಗಳಂತಹ ಪುಣ್ಯಪುರುಷರ ಜನ್ಮದಿನದಂದು ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ಲೋಕಾರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣ. ಚಿಕ್ಕಮಗಳೂರಿನಲ್ಲಿ ಹುಟ್ಟಿಬೆಳೆದು ಬೆಂಗಳೂರು ಸೇರಿ ತಮ್ಮದೇ ಬ್ರಿಗ್ರೆಡ್ ಸಾಮ್ರಾಜ್ಯ ನಿರ್ಮಿಸಿರುವ ಜಯಶಂಕರ್ ತಂಡ ಹುಟ್ಟೂರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅಂದದ ಸ್ಮಾರಕ ರಚಿಸಿರುವುದು ಅಭಿನಂದನಾರ್ಹ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಸ್ವಾತಂತ್ರ್ಯಹೋರಾಟಗಾರರ ಸ್ಮಾರಕ ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ಅಂದಿನ ಹೋರಾಟ, ಗಾಂಧೀಜಿ ಅವರ ಅನುಭವ ಜೀವಂತವಾಗಿಡಬೇಕು. ನಿರಂತರವಾದ ಸಮಾಜಜಾಗೃತಿ, ಎಲ್ಲರೂ ಒಂದೆಂಬ ಭಾವದಿಂದ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರಕ. ಕರ್ತವ್ಯವನ್ನು ನಿರ್ವಹಿಸಿ ಹಕ್ಕನ್ನು ಕೇಳಬೇಕೆಂಬುದು ತಿಳಿಸುತ್ತದೆ ಎಂದರು.

ಪುಣ್ಯಪುರುಷರ ಜಯಂತಿ ಜೊತೆಗೆ ಸನಾತನ ಪರಂಪರೆಯ ವಿಜಯದಶಮಿ ದುಷ್ಟಶಕ್ತಿಯ ವಿರುದ್ಧ ಸಜ್ಜನಶಕ್ತಿಯ ವಿಜಯವನ್ನು ಪ್ರತಿಪಾದಿಸುತ್ತದೆ. ರಾಷ್ಟ್ರಶಕ್ತಿ ಜಾಗೃತಿಯ ದಿನವೂ ಇದು ಎಂದ ಸಿ.ಟಿ.ರವಿ, ಸ್ವಾತಂತ್ರ್ಯಹೋರಾಟ ಯಜ್ಞದಲ್ಲಿ ಲಕ್ಷಾಂತರ ಜನ ತ್ಯಾಗ-ಬಲಿದಾನ ಮಾಡಿದ್ದಾರೆ. ಅದರಲ್ಲಿ ಒಂದಷ್ಟು ಜನರ ಹೆಸರು ದಾಖಲಾಗಿದ್ದರೆ ಹಲವರ ಹೆಸರು ದಾಖಲಾಗಿಲ್ಲ. ನಮ್ಮದೇ ರಾಜ್ಯದ ಮಿಧುರಾಶ್ವಥದಲ್ಲಿ-ಈಸೂರು ಹೋರಾಟದಲ್ಲಿ ಮಣಿದವರ ಹೆಸರುಗಳು ದಾಖಲಿಲ್ಲ ಎಂದು ಉದಾಹರಿಸಿದರು.

ರಕ್ತಬಸಿದ ಕ್ರಾಂತಿಕಾರಿಗಳ ಹೋರಾಟದ ಕ್ಷಾತ್ರತೇಜದ ಪ್ರದರ್ಶನದ ಜೊತೆಗೆ ಆಧ್ಯಾತ್ಮಪ್ರಧಾನ ದೇಶದಲ್ಲಿ ಭಾವನೆಗಳನ್ನು ಜೋಡಿಸಬಹುದೆಂದ ಗಾಂಧೀಜಿ ಮತ್ತಿತರರ ಉಪ್ಪಿನಸತ್ಯಾಗ್ರಹ-ಚರಕ-ಖಾದಿ ಸ್ವಾವಲಂಬಿ ಚಳುವಳಿ ಮೂಲಕ ರಾಷ್ಟ್ರಕಾರ್‍ಯಕ್ಕೆ ಜನಸಾಮಾನ್ಯರನ್ನು ಜೋಡಿಸುವ ಕಾರ್‍ಯವೂ ನಡೆದಿದೆ. ಅಹಿಂಸಾತ್ಮಕ ಹೋರಾಟದಿಂದಲೇ ಸ್ವಾತಂತ್ರ್ಯಸಿಕ್ಕಿತ್ತೆಂಬುದು ಅರ್ಧಸತ್ಯ. ಕ್ರಾಂತಿಕಾರಿಗಳ ಕಿಚ್ಚು ಹೋರಾಟವೂ ಇದರಲ್ಲಿ ಪ್ರಮುಖವಾಗಿ ಸೇರಿದೆ ಎಂದರು.

ರಾಷ್ಟ್ರವು ಹಲವು ಅಪಾಯಗಳಿಗೆ ಇಂದು ತುತ್ತಾಗಿದೆ. ವೈವಿಧ್ಯತೆಯನ್ನೆ ಪರಸ್ಪರ ಎತ್ತಿಕಟ್ಟುವ ಸಂಚು ನಡೆದಿದೆ. ಉತ್ತರ ಮತ್ತು ದಕ್ಷಿಣ ಭೌಗೋಳಿಕ ಅಂಶವನ್ನು ಪರಿಗಣಿಸಿ ಒಡೆಯುವ ಮಾತು ಕೇಳಿಬರುತ್ತಿದೆ. ೨೨ಭಾಷೆಗಳೂ ರಾಷ್ಟ್ರಭಾಷೆಯಾಗಿ ಪರಿಗಣಿಸಲ್ಪಟ್ಟಿದ್ದರೂ ಭಾಷೆಯ ಹೆಸರಿನಲ್ಲಿ ಒಡಕುಧ್ವನಿ ಕೇಳುತ್ತಿದೆ. ಇಂತಹ ಸಂಚಿಗೆ ಬಲಿಯಾದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಸಿ.ಟಿ.ರವಿ, ನಿರಂತರ ಜಾಗೃತಿಗೆ ಉತ್ತಮ ಪರಿಹಾರ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ವಿಶ್ವ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆದಿರುವ ಚಿಕ್ಕಮಗಳೂರಿನ ಹಿರಿಮೆಗೆ ಮತ್ತೊಂದು ಗರಿ ಈ ಸ್ಮಾರಕ. ಇದು ಊರಿನ ಲ್ಯಾಂಡ್‌ಮಾರ್ಕ್ ಆಗಲಿದೆ. ಜಯಶಂಕರ್ ಅವರ ಬ್ರಿಗ್ರೆಡ್ ಒಳ್ಳೆಯಕೆಲಸ ಮಾಡಿದೆ. ಶಾಲೆಯ ಮುಂಭಾಗದಲ್ಲಿ ರೂಪುಗೊಂಡಿರುವ ಸ್ಮಾರಕ ಯುವಮನಸ್ಸುಗಳಿಗೆ ಉತ್ತಮ ಸಂದೇಶ ನೀಡುತ್ತದೆ. ಇದೇ ಶಾಲೆಯಲ್ಲಿ ಜಯಶಂಕರ ಕುಟುಂಬದ ೨೨ಮಂದಿ ಕಲಿತಿದ್ದು ಋಣತೀರಿಸುವ ಅರ್ಥಪೂರ್ಣ ಕಾರ್‍ಯ ನಿರ್ವಹಿಸಿದ್ದಾರೆಂದರು.

ದೂರದರ್ಶನ ನಿರೂಪಕ ಶಂಕರಪ್ರಕಾಶ್ ಕಾರ್‍ಯಕ್ರಮ ನಿರೂಪಿಸಿದ್ದು, ಜಯಶಂಕರ್ ಸ್ವಾಗತಿಸಿ, ಸಿಇಓ ಶಿವಯೋಗಿಕಳಸದ ವಂದಿಸಿದರು. ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿ.ಪಂ.ಸಿಇಓ ಕೀರ್ತನಾ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯ ಕುಮಾರ, ಸ್ಮಾರಕದ ವಾಸ್ತುಶಿಲ್ಪಿ ಸಂಜಯ್, ಬ್ರಿಗ್ರೆಡ್ ನಿರ್ದೇಶಕರಾದ ಎಂ.ಆರ್.ಗುರುಮೂರ್ತಿ ಮತ್ತು ನಿರೂಪಾಶಂಕರ್ ಮತ್ತಿತರರು ವೇದಿಕೆಯಲ್ಲಿದ್ದರು.

Memorial dedication of freedom fighters

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...